ವನ್ಯಜೀವಿಗಳ ಸಂರಕ್ಷಣೆ ಮಾಡಿ

Markunda
Published on

ಬೀದರ್: ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಪ್ರಮುಖ. ಹೀಗಾಗಿ ಪ್ರತಿಯೊಬ್ಬರೂ ವನ್ಯಜೀವಿಗಳ ಸಂರಕ್ಷಣೆ ಮಾಡಬೇಕು ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ ಗಾಜರೆ ಹೇಳಿದರು.
ಚಾಲುಕ್ಯ ಶಿಕ್ಷಣ ಸಂಸ್ಥೆ, ಪರಿಸರ ವಾಹಿನಿ ಹಾಗೂ ಅರಣ್ಯ ಇಲಾಖೆ ಸಹಯೋಗದಡಿ ಮರಕುಂದಾ ಗ್ರಾಮದ ಜೈಪ್ರಕಾಶ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆ ಜನಜಾಗೃತಿ ಹಾಗೂ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ ತಡೆಯಬೇಕು. ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದರ ಜತೆ ಜೀವ ವೈವಿಧ್ಯದ ರಕ್ಷಣೆ ಮೂಲಕ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಪರಿಸರವಾದಿ ಶೈಲೇಂದ್ರ ಕಾವಡಿ ಮಾತನಾಡಿ, ವನ್ಯಜೀವಿಗಳ ಬೇಟೆಯಾಡುವುದು ಅಪರಾಧ. ಅರಣ್ಯ ಸಂಪತ್ತು ಸಂರಕ್ಷಣೆ ಎಲ್ಲರ ಕರ್ತವ್ಯ. ವನ್ಯಜೀವಿ ದೇಶದ ಸಂಪತ್ತು. ಹೀಗಾಗಿ ಪ್ರತಿಯೊಬ್ಬರೂ ಅರಣ್ಯ ಜತೆಯಲ್ಲಿ ವನ್ಯಜೀವಿಗಳ ರಕ್ಷಿಸಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಚಾರ್ಯ ಶಿವಕುಮಾರ ನಾಗವಾರ ಮಾತನಾಡಿದರು. ಪ್ರೌಢಶಾಲೆ ಮುಖ್ಯಗುರು ಬಸವರಾಜ ಖ್ಯಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸೂರ್ಯಕಾಂತ ಮಠಪತಿ, ಬಕ್ಕಪ್ಪ ಶರ್ಮಾ, ವಿನಾಯಕ, ಗಣೇಶ ಅಶೋಕ, ಕೃಷ್ಣ, ಕಾಶೀನಾಥ ನಿಡಗುಂದಿ ಇತರರಿದ್ದರು.
ಪ್ರಾಥಮಿಕ ಶಾಲೆ ಮುಖ್ಯಗುರು ಸಂತೋಷ ಸಾದ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಪ್ತಾಹ ನಿಮಿತ್ತ ಏರ್ಪಡಿಸಿದ್ದ ನಿಬಂಧ ಮತ್ತು ಭಾಷಣ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net