

ಬೀದರ್: ರಾಷ್ಟ್ರದ ಸಂರಕ್ಷಣೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಯುವಾ ಬ್ರಿಗೇಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ನಗರದ ಸಿದ್ಧಾರೂಢ ಆಶ್ರಮ (ಗುಂಪಾ)ದಲ್ಲಿ ರಾತ್ರಿ ಆಯೋಜಿಸಿದ್ದ ಜನಗಣಮನ ಬೆಸೆಯೋಣ ಯಾತ್ರೆಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳ ನಂತರ ಭಾರತದ ರಕ್ಷಕನಾಗಿ ಮೋದಿ ಸಿಕ್ಕಿದ್ದಾರೆ. ಇವರನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ಮತ್ತೆ ಮೋದಿ ಪ್ರಧಾನಿ ಆಗಬೇಕು ಎಂದು ಹೇಳಿದರು.
ಕರೊನಾ ಸಂಕಷ್ಟದಲ್ಲಿ ದೇಶದ ಎಲ್ಲ ಪ್ರಜೆಗಳಿಗೆ ಲಸಿಕೆ ಕೊಡಿಸಿ ಮೋದಿ ಪ್ರಾಣ ಉಳಿಸಿದರು. ಹಲವು ದಶಕದಿಂದ ನನೆಗುದಿಗೆ ಬಿದ್ದಿದ್ದ ಅಯೋಧ್ಯೆ ರಾಮಮಂದಿರ ನಿಮರ್ಾಣವಾಗುತ್ತಿದೆ. ಕಾಶಿ ಕಾರಿಡಾರ್ ನಿರ್ಮಿಸಿ ಹಿಂದು ಧರ್ಮಕ್ಕೆ ಮೋದಿ ಗೌರವ ತಂದುಕೊಟ್ಟಿದ್ದಾರೆ. ದೇಶದ ಎಲ್ಲೆಡೆ ಅತ್ಯುತ್ತಮ ಹೆದ್ದಾರಿಗಳನ್ನು ನಿರ್ಮಸಿದ್ದಾರೆ ಎಂದರು.
ನಮಗೀಗ ಬಸ್ ಪ್ರಯಾಣ ಉಚಿತ ಸಿಗಬಹುದು. ಆದರೆ ಅತ್ಯಂತ ಹಾಳಾದ ರಸ್ತೆಗಳ ಮೇಲೆ ಭವಿಷ್ಯದಲ್ಲಿ ಪ್ರಯಾಣ ಮಾಡಬೇಕಾುತ್ತದೆ. ಉಚಿತವಾಗಿ ಐದು ಸಾವಿರ ಸಿಗಬಹುದು. ಗೌರವ ಸಿಗಲ್ಲ. ಉಚಿತ ಕೊಡುಗೆಗಳನ್ನು ಯಾರ ಮನೆಯಿಂದ ಕೊಡಲ್ಲ. ನಮ್ಮ ಹಣವನ್ನು ನಮಗೆ ಕೊಡುತ್ತಾರೆ. ಹೀಗಾಗಿ ಉಚಿತ ಕೊಡುಗೆಗಳಿಗೆ ಮರುಳಾಗಬೇಡಿ ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ಬಿ.ಜಿ. ಶೆಟಕಾರ ಇತರರಿದ್ದರು. ವೀರೇಶ ಸ್ವಾಮಿ ಸ್ವಾಗತಿಸಿದರು. ಕೇಂದ್ರ ಸಚಿವ ಭಗವಂತ ಖೂಬಾ, ಬಸವರಾಜ ಪಾಟೀಲ್, ಬಸವರಾಜ ಬಂಬುಳಗೆ, ಮಹೇಶ ಪಾಲಂ, ಗಣೇಶ ಭೋಸ್ಲೆ, ವರ್ಧಮಾನ ತ್ಯಾಗಿ, ವಿಶಾಲ ಬಾದಾಮಿ, ಪವನ್ ಉಂಡೆ ಇತರರಿದ್ದರು.
ಬೈಕ್ ಯಾತ್ರೆ: ನೌಬಾದ್ ಮೂಲಕ ನಗರಕ್ಕೆ ಆಗಮಿಸಿದ ಬೈಕ್ ರ್ಯಾಲಿ ಶಿವನಗರ, ಕೇಂದ್ರ ಬಸ್ ನಿಲ್ದಾಣ, ಮಡಿವಾಳ ವೃತ್ತ, ರೋಟರಿ ವೃತ್ತ, ಮೋಹನ ಮಾರ್ಕೆಟ್, ಹರಳಯ್ಯ ವೃತ್ತ , ಶಿವಾಜಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಭಗತಸಿಂಗ್ ವೃತ್ತ , ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಮೈಲೂರ ಕ್ರಾಸ್ ಮಾರ್ಗವಾಗಿ ಸಿದ್ಧಾರೂಢ ಮಠಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.