

ಬೀದರ್: ಪಾಲಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಸಲಹೆ ಮಾಡಿದರು.
ಜಮಾ ಅತೆ ಇಸ್ಲಾಮಿ ಹಿಂದ್ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ‘ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮಹಮ್ಮದ್’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಅನೇಕ ಪಾಲಕರು ತಮ್ಮ ಮಕ್ಕಳನ್ನು ವೈದ್ಯ, ಎಂಜಿನಿಯರ್ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದರೆ, ಅವರಿಗೆ ಮಾನವೀಯ ಮೌಲ್ಯಗಳನ್ನು ಹೇಳಿಕೊಡಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮನುಷ್ಯ ತಯಾರಿಸಿದ ಪ್ರತಿ ವಸ್ತುವಿಗೆ ಎಷ್ಟು ವರ್ಷ ಎನ್ನುವ ಗ್ಯಾರಂಟಿ ಇದೆ. ದೇವರು ಸೃಷ್ಟಿಸಿದ ಮನುಷ್ಯನಿಗೆ ಯಾವ ಗ್ಯಾರಂಟಿಯೂ ಇಲ್ಲ. ಇರುವಷ್ಟು ದಿನ ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಬದುಕು ಸಾಗಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ದೇವನೊಬ್ಬನೇ, ಮಾನವರೆಲ್ಲ ಸಮಾನರು ಎನ್ನುವ ಪ್ರವಾದಿ ಮಹಮ್ಮದರ ಸಂದೇಶ ಶ್ರೇಷ್ಠವಾದದ್ದು. ಮನೆತನ ಅಥವಾ ಸಂಪತ್ತಿನ ಆಧಾರದ ಶ್ರೇಷ್ಠತೆಗಳನ್ನು ಅವರು ಅಲ್ಲಗಳೆದಿದ್ದರು. ಕಾರಣ, ಬಡವ-ಬಲ್ಲಿದ, ಉಚ್ಚ-ನೀಚ ಎನ್ನದೆ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಬೆಲ್ದಾಳ ಸಿದ್ಧರಾಮ ಶರಣರು ನುಡಿದರು.
ಅಸಮಾನತೆಯಿಂದಾಗಿ ಸಮಾಜದಲ್ಲಿ ಹಿಂಸೆ, ದಬ್ಬಾಳಿಕೆ, ಅತ್ಯಾಚಾರಗಳು ನಡೆಯುತ್ತಿವೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸರ್ವರ ಏಳಿಗೆ ಸಮಾನತೆಯಿಂದಲೇ ಸಾಧ್ಯವಿದೆ ಎಂದು ಪ್ರತಿಪಾದಿಸಿದರು.
ಮಾನವನ ಜನ್ಮ ಪ್ರಕೃತಿಯಲ್ಲಿಯೇ ಆಗುತ್ತದೆ. ಯಾವುದೇ ಧರ್ಮದಲ್ಲಿ ಅಲ್ಲ. ಇಸ್ಲಾಂನ ನಮಾಜ್ ಸಮಾನತೆಯ ಪ್ರಾಯೋಗಿಕ ರೂಪವಾಗಿದೆ ಎಂದರು.
ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪರಮೇಶ್ವರ ನಾಯ್ಕ್ ಮಾತನಾಡಿ, ಬೀದರ್‍ನ ಸಾಮರಸ್ಯದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಡಾ. ಸುನಿತಾ ಕೂಡ್ಲಿಕರ್, ಡಾ. ಹುಸಾಮುದ್ದಿನ್ ಉಝೇರ್, ಮೌಲ್ವಿ ಮಹಮ್ಮದ್ ಫಹೀಮುದ್ದಿನ್, ಮಹಮ್ಮದ್ ಮೌಆಜ್ಝಂ ಮಾತನಾಡಿದರು.
ಲೇಖಕ ಯೋಗೇಶ ಮಾಸ್ಟರ್ ರಚಿಸಿರುವ ‘ನನ್ನ ಅರಿವಿನ ಪ್ರವಾದಿ’ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಬಿಡುಗಡೆ ಮಾಡಿದರು.
ಸಾಹಿತಿ ಡಾ. ಬಸವರಾಜ ಬಲ್ಲೂರ ಕೃತಿ ಪರಿಚಯ ನೀಡಿದರು. ಡಾ. ರಾಮಚಂದ್ರ ಗಣಾಪುರ ಪ್ರವಾದಿ ಅವರ ಕುರಿತು ಕವನ ವಾಚಿಸಿದರು. ಪ್ರಬಂಧ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಮಂಗಳೂರಿನ ಮಹಮ್ಮದ್ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಸೈಯದ್ ಅತೀಕ್ ಉಲ್ಲಾ ಕುರಾನ್ ಪಠಿಸಿದರು. ಫುರ್ಖಾನ್ ಪಾಶಾ ಕನ್ನಡಕ್ಕೆ ಅನುವಾದಿಸಿದರು. ನಿವೃತ್ತ ಪ್ರಾಚಾರ್ಯ ಮಹಮ್ಮದ್ ನಿಝಾಮುದ್ದಿನ್ ನಿರೂಪಿಸಿದರು.