

ಬೀದರ್: ಇಂದ್ರಧನುಷ್ 5.0 ಮೂರನೇ ಸುತ್ತಿನ ಅಭಿಯಾನ ಜಿಲ್ಲೆಯಲ್ಲಿ ಅ.9ರಿಂದ 14ರವರೆಗೆ ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಮತ್ತು ಯಾವುದೇ ಮಗು ಬಿಟ್ಟು ಹೋಗದಂತೆ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗರ್ಭಿಣಿ ಮತ್ತು 0.5 ವರ್ಷದ ಒಳಗಿನ ಮಕ್ಕಳು ಇಂದ್ರಧನುಷ್ ಲಸಿಕೆಯನ್ನು ಸಮೀಪದ ಕೇಂದ್ರಗಳಿಗೆ ಹೊಗಿ ಹಾಕಿಸಿಕೊಳ್ಳುವ ಮೂಲಕ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಸೇರಿ 3ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಯಾವುದೇ ಮಗು ಬಿಟ್ಟು ಹೋಗದಂತೆ ಯೋಜನೆ ರೂಪಿಸಿ ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು ಎಂದರು.
ಹುಮನಾಬಾದ್ ಮತ್ತು ಬೀದರ್ ತಾಲೂಕುಗಳಲ್ಲಿ ಮಾತ್ರ ಈ ಹಿಂದೆ ನಡೆದ ಅಭಿಯಾನ ಲಸಿಕೆ ಹೆಚ್ಚು ಹಾಕಲಾಗಿದ್ದು, ಇನ್ನುಳಿದ ಕಡೆ ಪ್ರಮಾಣ ಕಡಿಮೆಯಾಗಿದೆ. ಮೂರನೇ ಸುತ್ತಿನಲ್ಲಿ ಎಲ್ಲ ತಾಲೂಕುಗಳಲ್ಲಿ ಗುರಿ ಮುಟ್ಟಬೇಕು. ಸಿಬ್ಬಂದಿ ಕೊರತೆ ಇದ್ದರೆ ಅಭಿಯಾನ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಹೊರಗುತ್ತಿಗೆ ಸಿಬ್ಬಂದಿ ನಿಯೋಜಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ. ಮಾತನಾಡಿ, ಅಭಿಯಾನ ವೇಳೆ ವೈದ್ಯಕೀಯ ಅಧಿಕಾರಿಗಳು ಎಲ್ಲ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಹೇಗೆ ನಡೆಯುತ್ತಿದೆ ಎಂಬ ಮಾಹಿತಿ ಪಡೆಯುವ ಜತೆಗೆ ಸ್ಥಳೀಯವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಶಿವಶಂಕರ ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ, ಡಾ.ಅನೀಲಕುಮಾರ ತಾಳಿಕೋಟಿ, ಡಾ.ರಾಜಶೇಖರ ಪಾಟೀಲ್, ಡಾ.ಕಿರಣ ಪಾಟೀಲ್, ಡಾ.ಅನೀಲ ಚಿಂತಾಮಣಿ, ಡಾ.ದೀಪಾ ಖಂಡ್ರೆ, ಡಾ.ರಾಜಶೇಖರ ಪಾಟೀಲ್ ಇತರರಿದ್ದರು.