

ಬೀದರ್: ಜಿಲ್ಲೆಯ ವಿವಿಧ ಠಾಣೆ ವ್ಯಾಪ್ತಿಯಲ್ಲಿ ನಡೆದ 14 ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಿ 52,37,700 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ತಿಳಿಸಿದರು.
ಕಳ್ಳತನ, ಸುಲಿಗೆ ಸೇರಿ ಜಿಲ್ಲೆಯ ಐದು ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹುಮನಾಬಾದ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಬಂಸಿದಂತೆ ನಾಲ್ವರನ್ನು ಬಂಧಿಸಿ 2.55 ಲಕ್ಷದ 4.8 ತೊಲ ಚಿನ್ನಾಭರಣ, 80 ಸಾವಿರದ ಬೈಕ್, 1,36,700 ರೂ. ಮೌಲ್ಯದ 17 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ.. ಔರಾದ್ ನಲ್ಲಿ ನಡೆದ ಎರಡು ಕಳವು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ 1200 ರೂ. ನಗದು ಮತ್ತು 2.50 ಲಕ್ಷದ 8 ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಸವಕಲ್ಯಾಣ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ಬಂಗಾರ, ಬೆಳ್ಳಿ ಹಾಗೂ 9 ಮೋಟಾರ್ ಪಂಪ್ಸೆಟ್, ನಗದು 5 ಸಾವಿರ ರೂ. ಸೇರಿ 4,94,800 ರೂ. ವಸ್ತುಗಳನ್ನು ಜಪ್ತಿ ಮಾಡಿ ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.
41 ಬೈಕ್ ಜಪ್ತಿ: ಈಚೆಗೆ ಬೈಕ್ ಕಳ್ಳತನ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ತಡೆಗಟ್ಟಲು ಹಾಗೂ ಪತ್ತೆಗೆ ರೌಡಿ ನಿಗ್ರಹ ದಳ ತಂಡ ರಚಿಸಲಾಗಿತ್ತು. ಈ ತಂಡ ಕಾಯರ್ಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದೆ. ಗಾಂಧಿಗಂಜ್ ಠಾಣೆಯಲ್ಲಿ ದಾಖಲಾದ 4 ಪ್ರಕರಣಗಳ 5 ದ್ವಿಚಕ್ರ ವಾಹನ ಹಾಗೂ ಜಿಲ್ಲೆಯ ವಿವಿಧೆಡೆ, ಮಹಾರಾಷ್ಟ್ರ ಸೇರಿ 40.15 ಲಕ್ಷ ರೂ. ಮೌಲ್ಯದ 41 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಲಂಗೋಟಿ ಹೇಳಿದರು.
ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ್, ಜೆ.ಎಸ್. ನ್ಯಾಮಗೌಡರ, ಸಿಪಿಐ ಹನುಮರಡ್ಡಪ್ಪ ಇತರರಿದ್ದರು.
ಮೊಬೈಲ್ ಕದ್ದವ ಸೆರೆ
ಹುಮನಾಬಾದ್ನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮುದ್ದೆಮಾಲಿನ (ಪ್ರಾಪರ್ಟಿ) ಕೋಣೆಯಲ್ಲಿಟ್ಟಿದ್ದ ಹಳ್ಳಿಖೇಡ(ಬಿ) ಠಾಣೆ ಪ್ರಕರಣದ ಪೈಕಿ 10 ಮೊಬೈಲ್ ಕದ್ದಿದ್ದ ಇಬ್ಬರನ್ನು ಬಂಧಿಸಲಾಗಿದೆ. 2022ರ ಮಾ.15ರಿಂದ 2023ರ ಸೆ.30ರ ಅವಯಲ್ಲಿ ಕಳವು ನಡೆದಿದೆ ಎಂದು ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಜಿ.ಎಂ.ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ 6 ಮೊಬೈಲ್ ವಶಪಡಿಸಿಕೊಂಡಿದೆ. ಇನ್ನುಳಿದ ನಾಲ್ಕು ಮೊಬೈಲ್ ಪತ್ತೆ ಕಾರ್ಯ ಜಾರಿಯಲ್ಲಿದೆ ಎಂದು ಎಸ್ಪಿ ಚನ್ನಬಸವಣ್ಣ ತಿಳಿಸಿದರು.