ಅಭಿವೃದ್ಧಿಗಾಗಿ ದಕ್ಷತೆಯಿಂದ ಕೆಲಸ ಮಾಡಿ

dc office meeting
Published on

ಬೀದರ್: ಜಿಲ್ಲೆಯ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಸಂಬಂಧಿಸಿದ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಅಲೆಮಾರಿ ಜನಾಂಗದವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ತಾಕೀತು ಮಾಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅಲೆಮಾರಿ, ಅರೆಅಲೆಮಾರಿ ಜನಾಂಗದ ಪರಿಶೀಲನಾ ಮತ್ತು ಸಲಹಾ ಸಮಿತಿ ಸಭೆ ನಡೆಸಿದ ಅವರು, 2008ರಲ್ಲಿ ರದ್ದುಪಡಿಸಿದ 25 ಗೊಂದಳಿ ಸಮಾಜದ ನಿವೇಶನ ಅರ್ಜಿಯನ್ನು ಪುನಃ ಬೀದರ್ ನಗರಸಭೆಯ ಜಿ3 ಯೋಜನೆಯಡಿ ಸೇರಿಸುವಂತೆ ನಗರಸಭೆ ಆಯುಕ್ತರಿಗೆ ಪತ್ರ ಬರೆಯುವಂತೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ ಮನ್ನಳ್ಳಿಯ ದರ್ವೇಶಿ ಕಾಲನಿಯಲ್ಲಿ ರಸ್ತೆ ನಿರ್ಮಿಸಬೇಕು. ಹಿಂದೆ ಸಮಾಜದ ನಿವೇಶನಕ್ಕೆ ಸಂಬಂಸಿದ ಕೆಲಸ ಬಾಕಿ ಇದ್ದಲ್ಲಿ ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಯಾವ ತಾಲೂಕಿನಲ್ಲಿ ಅಲೆಮಾರಿಗಳಿಗೆ ನಿವೇಶನ ನಿರ್ಮಾಣಕ್ಕೆ ಸರ್ಕಾರಿ ಜಮೀನಿನ ಕೊರತೆ ಇದ್ದಲ್ಲಿ ಖಾಸಗಿ ಜಮೀನು ಖರೀದಿಸಬೇಕು. ಅಲೆಮಾರಿ ಸಮುದಾಯ ಭವನ ನಿರ್ಮಿಸುವಂತೆ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಿಪಂ ಸಿಇಒ ಶಿಲ್ಪಾ ಎಂ., ನಗರಸಭೆ ಆಯುಕ್ತ ಶಿವರಾಜ ರಾಠೋಡ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಬಡಿಗೇರ, ಸಮಾಜದ ನಾಗನಾಥ ವಾಕುಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net