

ಬೀದರ್: ಇಂಜಿನಿಯರಿಂಗ್, ಎಂಬಿಎ, ಎಂ.ಕಾಂ, ಡಿಸಿಇಟಿ ಹಾಗೂ ಪಿಜಿಸಿಇಟಿ ಮೂರನೇ ಸುತ್ತಿನ ಕೌನ್ಸೆಲಿಂಗ್ ನಡೆಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಸರ್ಕಾರಿ ಪಾಲಿಟೆಕ್ನಿಕ್ ನಿಂದ ಡಿಸಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು, ಡಿಪ್ಲೊಮಾ ಅಭ್ಯರ್ಥಿಗಳಿಗೆ ಎರಡನೇ ವರ್ಷದ ಇಂಜಿನಿಯರಿಂಗ್ಗೆ ಪ್ರವೇಶ ನೀಡುವ, ಎಂಬಿಎ ಮತ್ತು ಎಂಕಾಂಗೆ ಪ್ರವೇಶ ಕಲ್ಪಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕ್ರಿಯೆಗಳಲ್ಲಿ ಅನೇಕ ಲೋಪದೋಷಗಳಿವೆ. ಎರಡನೇ ಸುತ್ತಿನ ಕೌನ್ಸೆಲಿಂಗ್ ಕಟಾಫ್ ಫಲಿತಾಂಶವನ್ನು ಪ್ರಾಧಿಕಾರ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಿಲ್ಲ ಎಂದು ದೂರಿದರು.
ಪ್ರಸಕ್ತ ಸಾಲಿನ ಡಿಸಿಇಟಿ ಹಾಗೂ ಪಿಜಿಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಪಾರದರ್ಶಕ ನಡೆಸಬೇಕು. ಎರಡನೇ ಸುತ್ತಿನ ಕಟಾಫ್ ಫಲಿತಾಂಶ ಪ್ರಕಟಿಸಿ ಮೂರನೇ ಸುತ್ತಿನ ಕೌನ್ಸೆಲಿಂಗ್ ನಡೆಸಿ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಪಾಲಿಟೆಕ್ನಿಕ್ನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆ ಭರ್ತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರ ಕಾರ್ಯದರ್ಶಿ ಸಿದ್ದಾರ್ಥ ಬಾವಿದೊಡ್ಡಿ, ಸಂಘಟನಾ ಕಾರ್ಯದರ್ಶಿ ಹೇಮಂತ್, ನಿತೀಶ್, ಪವನ್, ಶಿವಕುಮಾರ, ಮೌನೇಶ ಪಾಂಚಾಳ, ದಾವೀದ್, ನಾಗರಾಜ, ವಿಶಾಲ ಇತರರಿದ್ದರು. ಸಿಎಂಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.