

ಬೀದರ್: ರಾಹುಲ್ ಗಾಂಧಿ ಬಗ್ಗೆ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡುವಷ್ಟು ಬೆಳೆದಿಲ್ಲ ಎಂಬ ಎಐಸಿಸಿ ಸದಸ್ಯ ಆನಂದ ದೇವಪ್ಪ ನೀಡಿರುವ ಹೇಳಿಕೆ ಹಾಸ್ಯಾಸ್ಪದ ಮತ್ತು ಹೊಟ್ಟೆಕಿಚ್ಚಿನಿಂದ ಕೂಡಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪಾಟೀಲ್ ಗಾದಗಿ ಹೇಳಿದ್ದಾರೆ.
ಕಾಂಗ್ರೆಸ್‌ನ ಪ್ರತಿಯೊಬ್ಬ ಮುಖಂಡ ಗಾಂಧಿ ಪರಿವಾರ ಮೆಚ್ಚಿಸುವ ಕೆಲಸದಲ್ಲಿ ತೊಡಗಿರುತ್ತಾರೆ. ಅವರ ಸಾಲಿನಲ್ಲಿ ಆನಂದ ದೇವಪ್ಪ ಸೇರಿದ್ದಾರೆ. ರಾಹುಲ್ ಪರಿವಾರವಾದ ರಾಜಕಾರಣದಿಂದ ಬೆಳೆದಿದ್ದಾರೆ. ಆದರೆ ಖೂಬಾ ಪಕ್ಷದ ಕಾರ್ಯಕರ್ತರಾಗಿ ಜವಾಬ್ದಾರಿಗಳನ್ನು ನಿಭಾಯಿಸಿ ಕೇಂದ್ರ ಸಚಿವರಾಗಿದ್ದಾರೆ. ದೇಶದಲ್ಲಿ ಏಕೈಕ ಲಿಂಗಾಯತ ಕೇಂದ್ರ ಸಚಿವರಾಗಿರುವ ಖೂಬಾ ಬಗ್ಗೆ ಮಾತನಾಡುವಾಗ ವಿಚಾರ ಮಾಡಬೇಕು ಎಂದು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿ ದೇಶದ ಸಂಸ್ಕೃತಿ, ಸಂವಿಧಾನದ ಬಗ್ಗೆ ಹೊರದೇಶಗಳಲ್ಲಿ ಅಪಪ್ರಚಾರ ಮಾಡುತ್ತ ತಿರುಗುತ್ತಿದ್ದಾರೆ. ಅವರಂತೆ ನಮ್ಮ ಸಚಿವರೇಕೆ, ನಾವು ಸಹ ಬೆಳೆಯಲು ಇಷ್ಟಪಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.