

ಭಾಲ್ಕಿ: ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಕಾಲೇಜಿನ ಎಲ್ಲ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಕಿಸಾನ್ ಶಿಕ್ಷಣ ಪ್ರಸಾರಕ ಮಂಡಳ ಅಧ್ಯಕ್ಷ ಅನೀಲ ಬಿ.ಸಿಂಧೆ ಘೋಷಿಸಿದರು.
ಪಟ್ಟಣದ ಶಿವಾಜಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಖೋಖೋ, ಸೈಕ್ಲಿಂಗ್, ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಮಾಡಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಪಠ್ಯಕ್ಕೆ ನೀಡಿದಷ್ಟು ಆದ್ಯತೆ ಕ್ರೀಡೆಗಳಿಗೂ ಕೊಡಬೇಕು. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಬರುವ ದಿನಗಳಲ್ಲಿ ಹೆಚ್ಚಿನ ತರಬೇತಿ ಪಡೆದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು.
ಸಂಸ್ಥೆ ಕಾರ್ಯದರ್ಶಿ ಡಾ.ಪ್ರಕಾಶ ಪಾಟೀಲ್ ಮಾತನಾಡಿ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಶಿವಾಜಿ ಕಾಲೇಜು ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆ ವಿಷಯ. ನಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಬಡ, ಕೂಲಿಕಾರ್ಮಿಕರ ಮಕ್ಕಳು. ಅವರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಬೋಧಕರಿಗೆ ಕಿವಿಮಾತು ಹೇಳಿದರು.
ಸಂಸ್ಥೆ ಉಪಾಧ್ಯಕ್ಷ ರಾಮರಾವ ಬಿರಾದಾರ್, ಖಜಾಂಚಿ ಪ್ರತಾಪರಾವ ಪಾಟೀಲ್, ನಿರ್ದೇಶಕ ಕೃಷ್ಣಕಾಂತ ಪಾಟೀಲ್, ಅನಂತ ಪಾಟೀಲ್, ಮಾಣಿಕರಾವ ಜಾಧವ್, ಓ.ಆರ್. ಕಾಕನಾಳೆ, ಆರ್.ಎಂ. ಬಿರಾದಾರ್, ಡಿ.ಜಿ. ಬಿರಾದಾರ್, ಜಿ.ಟಿ. ಜಾಧವ್, ಬಿ.ಎ.ಬಾಚಿಪಳ್ಳೆ, ಸಂಜೀವಕುಮಾರ ಬಿರಾದಾರ್, ಸಂದೀಪ ಫುಲೆ, ಸಚ್ಚಿದಾನಂದ ಸೇಡೋಳೆ, ಪೂಜಾ ಇಂಗಳೆ, ಪ್ರಣಿತಾ ಠಿಗಳೆ, ಜ್ಯೋತಿ ಸವಾಳೆ, ಮೀರಾ, ನಾಗೇಶ್ವರಿ ಜಗತಾಪ ಇತರರಿದ್ದರು. ಪ್ರಾಚಾರ್ಯ ಚಂದ್ರಕಾಂತ ಬಿರಾದಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಓಂಕಾರ ರಾಜಕುಮಾರ, ಪವನ್ ರಾಮಶೆಟ್ಟಿ, ಲೋಕೇಶ ಚಂದ್ರಕಾಂತ, ಭಾಗವತ ಪ್ರಕಾಶ, ರವೀಂದ್ರ ಪಾಂಡುರಂಗ, ಧನರಾಜ ಬಾಬುರಾವ, ಮಚ್ಚಿಂದ್ರ ರಾಮಲು, ಸಲ್ಮಾನ್ ಯೇಸುದಾಸ, ವಿಶಾಲ ಬಾಬುರಾವ, ಪ್ರದೀಪ ನರಸಿಂಗ, ಅಂಬಾದಾಸ ಶರಣಪ್ಪ, ರಾಮ ಭಾಗವತ, ಆಕಾಶ ಯೇಸುದಾ, ರಿನೋಲ್ಡ ರಾಮ, ರಂಜನಾ ಬಾಲಾಜಿ, ಜಗದೀಶ ರಾಜಶೇಖರ ಅವರನ್ನು ಸನ್ಮಾನಿಸಲಾಯಿತು.