ಭಾರತೀಯ ವಿಜ್ಞಾನಿಗಳ ಕೊಡುಗೆ ಅಪಾರ

bhalki math
Published on

ಭಾಲ್ಕಿ: ವಿಜ್ಞಾನ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಬಣ್ಣಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಏರ್ಪಡಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿ ವಿಜ್ಞಾನ ಆವರಿಸಿಕೊಂಡಿದೆ. ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳು ಸಂಶೋಧನೆ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಚಂದ್ರಯಾನ-3 ಯಶಸ್ಸಿನಿಂದ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿದೆ. ಈ ಕಾರ್ಯಕ್ಕೆ ಇಸ್ರೋ ವಿಜ್ಞಾನಿಗಳ ತಂಡ ಪರಿಶ್ರಮವೇ ಕಾರಣ ಎಂದರು.
ಸನ್ಮಾನ ಸ್ವೀಕರಿಸಿದ ಇಸ್ರೋ ಉಪ ನಿರ್ದೇಶಕ ಆರ್.ವಿ. ನಾಡಗೌಡ ಮಾತನಾಡಿ, ವಿಶ್ವ ಬಾಹ್ಯಾಕಾಶ ಸಪ್ತಾಹ ಅಂಗವಾಗಿ ಬಾಹ್ಯಾಕಾಶ ಕುರಿತು ಅರಿವು ಮತ್ತು ಆಸಕ್ತಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅ.10ರವರೆಗೆ 90 ರಾಷ್ಟ್ರಗಳಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ 10 ಸಾವಿರಕ್ಕಿಂತಲೂ ಹೆಚ್ಚಿನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಇಸ್ರೋ ತಂಡದ ಶಿವಕುಮಾರ ಹೆಡಗಾಪುರ, ವೀರೇಂದ್ರ ಕಾಮಶೆಟ್ಟಿ, ವಿಶ್ವನಾಥ ತಿರ್ಲಾಪುರ, ಶಾಮರಾವ, ಅಮರೇಶ ಚನ್ನಿ, ಉಮಾಕಾಂತ ಮಿರ್ಜಿ, ಆನಂದ ಲಸುನೆ, ರಮೇಶ ರಾಠೋಡ್, ಅಶೋಕ, ಸಂಜಯ ಪಾವಲೆ, ಆನಂದ ಕುಲಕರ್ಣಿ, ಸೆಲ್ವಕುಮಾರ, ಶಕುಂತಲಾ ಬಂಡೆಪ್ಪ ಪನಶೆಟ್ಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net