ಜಾನಪದ ಜಾತ್ರೆಯಲ್ಲಿ ಗಾಯನ, ನೃತ್ಯ ವೈಭವ

Janapd
Published on

ಬೀದರ್: ನಗರದ ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದಲ್ಲಿ ಆಯೋಜಿಸಿದ್ದ ಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಜಾನಪದ ಜಾತ್ರೆಯಲ್ಲಿ ಗಾಯನ, ನೃತ್ಯಗಳು ಸಭಿಕರನ್ನು ರಂಜಿಸಿದವು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ, ಕೇಂದ್ರದ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರುಣಾಮಯ ಯುವಕ ಸಂಘದ ಸಹಯೋಗದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರು ಹೊಸ ಲೋಕವನ್ನೇ ಸೃಷ್ಟಿಸಿದರು.
ಬಸವಕಲ್ಯಾಣ ತಾಲೂಕಿನ ಕಲಖೋರಾ ತಾಂಡಾದ ಭಾರತಬಾಯಿ ನೇತೃತ್ವದ ತಂಡದ ಲಂಬಾಣಿ ನೃತ್ಯ ಕಣ್ಮನ ಸೆಳೆಯಿತು. ಸಾಂಪ್ರದಾಯಿಕ ವೇಷ ಧರಿಸಿದ ಮಹಿಳೆಯರು ತಲೆ ಮೇಲೆ ಅಲಂಕೃತ ಕೊಡವನ್ನಿಟ್ಟುಕೊಂಡು ನಡೆಸಿಕೊಟ್ಟ ನೃತ್ಯ ಅದ್ಭುತವಾಗಿತ್ತು.
ಚಿಟ್ಟಾದ ಶೇಷಪ್ಪ ತಂಡ ಹಲಗೆ ಕುಣಿತ, ಬಸವಕಲ್ಯಾಣ ತಾಲೂಕಿನ ಯರಂಡಗಿಯ ಮಾಣಿಕ ಮಾಳಪ್ಪ ತಂಡ ಡೊಳ್ಳು ಕುಣಿತ, ಕಲಬುರಗಿ ತಾಲೂಕಿನ ಐನೋಳ್ಳಿಯ ವಿಜಯಕುಮಾರ ತಂಡ ಪುರವಂತಿಕೆ ಕುಣಿತ, ಯದಲಾಪುರದ ಅರಣಕುಮಾರ ಮತ್ತು ತಂಡ ಭೂತೇರ ಕುಣಿತ, ಗದಗದ ಜಾನಪದ ಕಲಾವಿದರಾದ ರಾಜಶೇಖರಯ್ಯ ಹಿರೇಮಠ ತಂಡ ಜಾನಪದ ನೃತ್ಯ ಮತ್ತು ಗಾಯನ ನಡೆಸಿಕೊಟ್ಟವು. ದಾನೇಶ್ವರಿ ಮೇಲಿನಮಠ, ಆಶ್ವಿನಿ ಸ್ವಾಮಿ ಜಾನಪದ ಗಾಯನ ಮಾಡಿದರು. ರಾಜಕುಮಾರ ಸ್ವಾಮಿ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಎಂ.ಡಿ. ಗೌಸೊದ್ದೀನ್ ಉದ್ಘಾಟಿಸಿದರು. ಶ್ರೀ ಶಿವಾನಂದ ಶಿವಾಚಾರ್ಯ ತಮಲೂರು, ಶ್ರೀ ರುದ್ರಮುನಿ ಶಿವಾಚಾರ್ಯ ಚಾಂಬೋಳ ಸಾನ್ನಿಧ್ಯ, ಜಾನಪದ ಪರಿಷತ್ ಆಡಳಿತ ಮಂಡಳಿ ಸದಸ್ಯ ಡಾ.ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಧನರಾಜ ಹಂಗರಗಿ, ಮಾರುತಿ ಸೋನಾರ, ಪ್ರಶಾಂತ ದೊಡ್ಡಿ, ಪುಂಡಲೀಕಪ್ಪ ಪಾಟೀಲ್ ಗುಮ್ಮಾ ಇತರರಿದ್ದರು. ಶುಕ್ಲತೀರ್ಥ ಟ್ರಸ್ಟ್ ಅಧ್ಯಕ್ಷ ಓಂಪ್ರಕಾಶ ಬಜಾರೆ ಸ್ವಾಗತಿಸಿದರು. ಜಾನಪದ ಪರಿಷತ್ ಜಿಲ್ಲಾ ಸಂಯೋಜಕ ಡಾ.ರಾಜಕುಮಾರ ಹೆಬ್ಬಾಳೆ ನಿರೂಪಣೆ ಮಾಡಿದರು. ರಾಜಕುಮಾರ ಜಮಾದಾರ ವಂದಿಸಿದರು.

ಭವ್ಯ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ನಾವದಗೇರಿ ಹನುಮಾನ ಮಂದಿರದಿಂದ ಶುಕ್ಲತೀರ್ಥ ದೇವಸ್ಥಾನವರೆಗೆ ಭವ್ಯ ಮೆರವಣಿಗೆ ನಡೆಯಿತು. ಗಾಂಧಿಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ ಚಾಲನೆ ನೀಡಿದರು. ಪ್ರಮುಖರಾದ ಫರ್ನಾಂಡಿಸ್ ಹಿಪ್ಪಳಗಾಂವ್, ವಿಜಯಕುಮಾರ ಸೋನಾರೆ, ಸುನೀಲ ಬಚ್ಚನ್, ಅಶೋಕ ಹೆಬ್ಬಾಳೆ ಇತರರಿದ್ದರು. ಹಿರಿಯ ಕಲಾವಿದರಾದ ರಾಮುಲು ಗಾದಗಿ ಮತ್ತು ಪುಂಡಲೀಕಪ್ಪ ಪಾಟೀಲ್ ನೇತೃತ್ವದಲ್ಲಿ ರಾತ್ರಿ ಸಂಗೀತ ದರ್ಬಾರ್ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net