

ಬಸವಕಲ್ಯಾಣ: ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮ ಧನ್ನೂರ(ಆರ್)ಗೆ ಆಗಮಿಸಿದ ವೀರಯೋಧ ಸಂಜೀವಕುಮಾರ ಖಿಂಡಿ ಅವರನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಮದ್ರಾಸ್ ರೆಜಿಮೆಂಟ್ನಲ್ಲಿ ಸೇವೆಗೆ ಸೇರಿದ ಸಂಜೀವಕುಮಾರ ಖಿಂಡಿ ಬಿಹಾರ, ರಾಜಸ್ಥಾನ, ಜಮ್ಮು ಕಾಶ್ಮೀರ, ನವದೆಹಲಿ, ಕೇರಳ, ಉತ್ತರಾಖಂಡಗಳಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ವಿವಿಧ ಯುದ್ಧಗಳಲ್ಲೂ ಭಾಗಿಯಾಗಿ ಧೈರ್ಯದಿಂದ ಹೋರಾಟ ನಡೆಸಿದ್ದಾರೆ.
ಇದೀಗ ನಿವೃತ್ತಿ ಪಡೆದು ಊರಿಗೆ ಮರಳಿದ ಅವರನ್ನು ಸಡಕ್ ಕಿಣ್ಣಿಯಿಂದ ಬೈಕ್ ರ್ಯಾಲಿ ಮೂಲಕ ಕರೆತರಲಾಯಿತು. ಹಳ್ಳಿಖೇಡ(ಕೆ) ಕೈಲಾಶನಾಥೇಶ್ವರ ಮಂದಿರದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಕುದರೆ ಮೇಲೆ ಕೂರಿಸಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ತೆಗೆಯಲಾಯಿತು.
ನಂತರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ದೇಶದ ಜನರ ಸುರಕ್ಷತೆಗಾಗಿ ಪ್ರಾಣವನ್ನು ಒತ್ತೆಯಿಟ್ಟು ಗಡಿಯಲ್ಲಿ ಕಾಯುವ ಯೋಧರ ಸೇವೆಗೆ ಸರಿಸಾಟಿ ಯಾವುದೂ ಇಲ್ಲ. ಅಂಥವರನ್ನು ಸನ್ಮಾನಿಸುವುದು ನಾವು ತೋರಿಸುವ ಅಳಿಲು ಸೇವೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಸಂಜೀವಕುಮಾರ ಖಿಂಡಿ, ಪೂರ್ವಜನ್ಮದ ಪುಣ್ಯದ ಫಲವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ದೇಶದ ವಿವಿಧೆಡೆ ಕೆಲ ಕಠಿಣ ಸಂದರ್ಭಗಳಲ್ಲೂ ಸೇವೆ ಸಲ್ಲಿಸಿರುವ ಅನುಭವವನ್ನು ಮರೆಯಲಾಗದು. ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ರಾಚಣ್ಣ ಸಾಹುಕಾರ, ಉದ್ಯಮಿ ಯಲ್ಲಪ್ಪ ಹಿರಗೆಪ್ಪನೋರ್, ಪ್ರಮುಖರಾದ ರವೀಂದ್ರ ಚನ್ನಗೊಂಡ, ಝರೆಪ್ಪ ಚನ್ನಗೊಂಡ, ರಾಜಕುಮಾರ ಖಿಂಡಿ, ಬಸವರಾಜ ಮಾಳಗೆ, ರಾಜು ಮನಿಗಿನಿ ಇತರರಿದ್ದರು.