

ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಸಿಕಿಂದ್ರಾಪುರ ಗ್ರಾಮದಿಂದ ಆಣದೂರವರೆಗೆ ಲೋಕೋಪಯೋಗಿ ಇಲಾಖೆ ನಬಾಡ್೯ ಯೋಜನೆಯಡಿ 4.15 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಮತ್ತು ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಸಿಕಿಂದ್ರಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಕಾಮಗಾರಿಯನ್ನು ಕಾಲಮಿತಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು. ಅಧಿಕಾರಿಗಳು ನಿಗಾ ವಹಿಸಬೇಕು. ಸ್ಥಳದಲ್ಲಿ ಸ್ಥಳೀಯರು ನಿಂತು ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಕೋರಿದರು.
ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಗ್ರಾಮದಲ್ಲಿ ಮೂಲಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಪ್ರಗತಿ ಹೊಂದಲಿದೆ ಎಂದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಕುಶಾಲರಾವ ಯಾಬಾ, ಸುರೇಶ ಮಾಶೆಟ್ಟಿ, ಕೃಷ್ಣರಡ್ಡಿ, ವೈಜಿನಾಥ ಪಾಟೀಲ್, ಬಸಪ್ಪ ವಡ್ಡಿ, ವಿಶ್ವನಾಥ ಪಾಟೀಲ್, ಶ್ರೀನಿವಾಸರಡ್ಡಿ, ಈಶ್ವರ ಸೋನಿ, ಸುಭಾಷ ವರ್ಮಾ, ಬಸವರಾಜ ಪಟೋದಿ, ಸಂತೋಷ ಸೋರಳ್ಳಿ ಇತರರಿದ್ದರು.