

ಬೀದರ್: ಮಾಜಿ ಶಾಸಕ ಬಿ. ನಾರಾಯಣರಾವ್ ಹಿಂದುಳಿದ ವರ್ಗಗಳ ಗಟ್ಟಿ ಧ್ವನಿಯಾಗಿದ್ದರು ಎಂದು ಹಿರಿಯ ಮುಖಂಡ ಬಕ್ಕಪ್ಪ ಶೇರಿಕಾರ್ ಬಣ್ಣಿಸಿದರು.
ನಗರದ ಕುಂಬಾರವಾಡದ ಕರುನಾಡು ಸಾಂಸ್ಕøತಿಕ ಭವನದ ಸಭಾಂಗಣದಲ್ಲಿ ನಡೆದ ಬಿ. ನಾರಾಯಣರಾವ್- ಒಂದು ನೆನಪು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೀನ, ದಲಿತರು, ನಿರ್ಗತಿಕರ ಏಳಿಗೆಗೆ ಅವಿರತ ಶ್ರಮಿಸಿದ್ದರು. ಕಷ್ಟಗಳ ಮಧ್ಯೆಯೇ ಎತ್ತರಕ್ಕೆ ಬೆಳೆದಿದ್ದರು. ಶಾಸಕರಾಗಿ ಬಸವಕಲ್ಯಾಣ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯಕ್ಕೆ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ ಸದಾಶಿವ ಮಾತನಾಡಿ, ಬಿ. ನಾರಾಯಣರಾವ್ ಜಿಲ್ಲೆಯ ಅನೇಕ ಯುವಕರಿಗೆ ಉದ್ಯೋಗ ಕೊಡಿಸಿದ್ದರು. ಬದುಕಿಗೆ ಭದ್ರ ನೆಲೆ ಕಲ್ಪಿಸಿದ್ದರು ಎಂದು ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ಹುಮನಾಬಾದ್ ಶಾಖಾ ಅಧಿಕಾರಿ ಈಶ್ವರ ಮಲ್ಕಾಪುರೆ ಮಾತನಾಡಿ, ಬಸವಕಲ್ಯಾಣದ ನೂತನ ಅನುಭವ ಮಂಟಪ ನಿರ್ಮಾಣದಲ್ಲಿ ನಾರಾಯಣರಾವ್ ಪಾತ್ರ ಪ್ರಮುಖವಾಗಿದೆ. ಈ ಬಗ್ಗೆ ಅವರು ವಿಧಾನಸೌಧದಲ್ಲಿ ಧ್ವನಿ ಎತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಗೊಂಡ ವಿದ್ಯಾರ್ಥಿ ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಾತನಾಡಿ, ನಾರಾಯಣರಾವ್ ಅವರು ಹೋರಾಟಗಾರರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಬಡವರ ಪರವಾಗಿ ಕೆಲಸ ಮಾಡಿದ್ದರು ಎಂದು ಹೇಳಿದರು.
ಪ್ರಮುಖರಾದ ಬಿ. ಸೋಮನಾಥ, ನಾಗಶೆಟ್ಟೆಪ್ಪ ಜ್ಯೋತೆಪ್ಪನೋರ್, ಸಾಹಿತಿ ಸಂಜೀವಕುಮಾರ ಅತಿವಾಳೆ ಅವರು ಬಿ. ನಾರಾಯಣರಾವ್ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದರು.
ರವಿದಾಸ ಕಾಂಬಳೆ, ಪಾರ್ವತಿ ರಾಜೋಳಿ, ಅಂಬವ್ವ ಮಲ್ಕಾಪುರೆ ಅವರು ನಾರಾಯಣರಾವ್ ಕುರಿತ ಗೀತೆಗಳನ್ನು ಹಾಡಿದರು. ಆತ್ಮಾನಂದ ಬಂಬಳಗಿ ಸ್ವಾಗತಿಸಿದರು. ಎಂ.ಪಿ. ವೈಜಿನಾಥ ನಿರೂಪಿಸಿದರು. ಪ್ರಕಾಶ ಗೋರನಳ್ಳಿ ವಂದಿಸಿದರು.