

ಬೀದರ್: ನೆರೆಯ ತೆಲಂಗಾಣದ ನಿಜಾಮಾಬಾದ್ ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ವಾಯುಪಡೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದರು.
ವಿಶೇಷ ವಿಮಾನದಲ್ಲಿ ನವದೆಹಲಿಯಿಂದ ಹೊರಟ ಮೋದಿ ಮಧ್ಯಾಹ್ನ 3ಕ್ಕೆ ವಾಯುಪಡೆ ಕೇಂದ್ರಕ್ಕೆ ಬಂದಿಳಿದರು. ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದು ಪಾಟೀಲ್, ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಈಶ್ವರಸಿಂಗ್ ಠಾಕೂರ್ ಪ್ರಧಾನಿಯವರನ್ನು ಸ್ವಾಗತಿಸಿದರು.
ವಿಮಾನದಿಂದ ಇಳಿದ ಮೋದಿ ಪ್ರಮುಖರಿಂದ ಹೂಗುಚ್ಛ ಸ್ವೀಕರಿಸಿ ನೇರವಾಗಿ ರಕ್ಷಣಾ ಪಡೆ ಹೆಲಿಕಾಪ್ಟರ್ ನಲ್ಲಿ ಕುಳಿತು ನಿಜಾಮಬಾದ್ ಗೆ ತೆರಳಿದರು. ಅಲ್ಲಿನ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ ನಲ್ಲಿ ಸಂಜೆ 6.30ಕ್ಕೆ ಮತ್ತೆ ಇಲ್ಲಿಗೆ ಬಂದ ಅವರು ವಿಶೇಷ ವಿಮಾನದಿಂದ 6.40ಕ್ಕೆ ನವದೆಹಲಿಗೆ ಪ್ರಯಾಣ ಬೆಳೆಸಿದರು. ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ಶರಣ ಸಲಗರ, ಡಿಐಜಿ ಅಜಯ ಹಿಲೋರಿ, ಪ್ರಾದೇಶಿಕ ಆಯುಕ್ತ ಚಂದ್ರಶೇಖರ ನಾಯಕ್, ಜಿಲ್ಲಾಕಾರಿ ಗೋವಿಂದರಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ ಇತರರಿದ್ದರು.
ಸಿಎಂಗೆ ಧನ್ಯವಾದ ಹೇಳಿ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ವಾಯುನೆಲೆಯಲ್ಲಿ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ ಮೋದಿ ಅವರು 50 ಸೆಕೆಂಡ್ ಖಂಡ್ರೆ ಜತೆ ಮಾತನಾಡಿದರು. ಕರ್ನಾಟಕದ ಜನತೆ ಹಾಗೂ ಬಸವ ನಾಡಿನ ಪರವಾಗಿ ಸ್ವಾಗತಿಸುವೆ ಎಂದು ಖಂಡ್ರೆ ಹೇಳಿದಾಗ ಮೋದಿ ಅವರು, ನಾಡಿನ ಜನತೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ನನ್ನ ಧನ್ಯವಾದ ತಿಳಿಸಿ ಎಂದು ಹೇಳಿದರು.