

ಬೀದರ್: ಬೀದರ್ ನಗರದಲ್ಲಿ 25 ಸೇರಿ ಲೋಕಸಭೆ ಕ್ಷೇತ್ರದ 100 ಕಡೆ ಓಪನ್ ಜಿಮ್ ಅಳವಡಿಸುವ ಕಾಮಗಾರಿಗೆ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು.
ಇಲ್ಲಿನ ಸಿದ್ರಾಮಯ್ಯ ಬಡಾವಣೆಯ ಅಟಲ್ಜಿ ಪಾಕ್೯ ಹಾಗೂ ಗುಂಪಾ ಹತ್ತಿರದ ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಭೂಮಿಪೂಜೆ ನೆರವೇರಿಸಿದ ಅವರು, ಕಳೆದ 9 ವರ್ಷಗಳಲ್ಲಿ ಎಲ್ಲರ ಆಶೀರ್ವಾದದಿಂದ ಸಂಸದನಾಗಿ, ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವನಾಗಿ ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿರುವೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಜತೆಗೆ ಎಲ್ಲ ವರ್ಗದವರ ಧ್ವನಿಯಾಗಿ ದುಡಿಯುತ್ತಿರುವೆ ಎಂದರು.
ಸ್ವಾತಂತ್ರ್ಯ ಬಂದ ನಂತರ ಹೆಚ್ಚಿನ ಸಮಯ ರಾಷ್ಟ್ರಕ್ಕೆ ಸರಿಯಾದ ನಾಯಕತ್ವ ಸಿಕ್ಕಿರಲಿಲ್ಲ. ಇದರಿಂದ ನಿರೀಕ್ಷಿತ ಅಭಿವೃದ್ಧಿ ಆಗಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶ ಬಹಳಷ್ಟು ಅಭಿವೃದ್ಧಿ ಕಂಡಿದೆ. ಜಿಲ್ಲೆಯಲ್ಲಿ ಕೇವಲ ಒಂದು ಹೆದ್ದಾರಿ ಇತ್ತು. ಇದೀಗ ಈ ಸಂಖ್ಯೆ 12ಕ್ಕೆ ಏರಿದೆ. ಬೀದರ್ನಿಂದ ದೇಶದ ಎಲ್ಲ ದಿಕ್ಕುಗಳಿಗೆ ಚಲಿಸಲು 13 ಹೊಸ ರೈಲು, ಪಾಸ್ ಪೋರ್ಟ್ ಸೇವಾ ಕೇಂದ್ರ, ಸೈನಿಕ ಶಾಲೆ, ಸಿಪೆಟ್ ಮುಂತಾದ ಪ್ರಗತಿಪರ ಕಾರ್ಯ ಮಾಡಿರುವೆ ಎಂದು ತಿಳಿಸಿದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ನಗರಸಭೆ ಸದಸ್ಯರಾದ ಶಶಿ ಹೊಸಳ್ಳಿ, ರಾಜರಾಮ ಚಿಟ್ಟಾ, ಮುಖಂಡರಾದ ವಿಕ್ರಮ ಮುದಾಳೆ, ಸಂಗಮೇಶ ನೌಬಾದೆ, ಭಗುಸಿಂಗ್ ಜಾಧವ್, ರಾಜಕುಮಾರ ಚಿದ್ರೆ, ನಾಗಭೂಷಣ ಕಮಠಾಣೆ, ಶಿವಾನಂದ, ಮಾಣಿಕರಾವ ಪಾಟೀಲ್, ಮಡಿವಾಳಯ್ಯ ಸ್ವಾಮಿ, ವಿರೂಪಾಕ್ಷಯ್ಯ ಸ್ವಾಮಿ, ವೀರೇಶ ಸ್ವಾಮಿ, ಗೀತಾ ಗಡ್ಡೆ, ಶಾಂತಾ, ಕೀರ್ತಿ ಲತಾ ಹೊಸಳ್ಳಿ, ವೀರೇಶ ಅಲಶೆಟ್ಟಿ, ಸಂಜೀವ ರಾಠೋಡ್, ಪುಷ್ಪಕ ಜಾಧವ್, ಉಪಾರ ಕೃಷ್ಣ ಇತರರಿದ್ದರು.