

ಬೀದರ್: ಕ್ರೀಡೆ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ವತಿಯಿಂದ ಇಲ್ಲಿಯ ಎನ್.ಎಫ್. ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ಮನಸ್ಸಿಗೆ ಆನಂದ ಸಿಗುತ್ತದೆ. ಸದೃಢ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆಯುಷ್ಯವೂ ವೃದ್ಧಿಸುತ್ತದೆ ಎಂದು ತಿಳಿಸಿದರು.
ಕ್ರೀಡೆಯಲ್ಲಿ ಸಾಧನೆಗೆ ಬಹಳ ಅವಕಾಶವಿದೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಬಹುದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಎಲ್ಲವನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ ಕ್ರೀಡಾ ಧ್ವಜಾರೋಹಣ ಮಾಡಿದರು. ಡಾ. ಮತ್ಮಥ್ ಡೋಳೆ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಪ್ರಭು ಎಸ್., ಓಂಕಾಂತ ಸೂರ್ಯವಂಶಿ, ಶಿವರಾಜ ಪಾಟೀಲ, ಎಲಿಜಬೆತ್ ಸ್ವರೂಪರಾಣಿ, ರಾಜಶೇಖರ ಮಂಗಲಗಿ, ಬಾಲಾಜಿ ವಾಡೇಕರ್, ಓಂಪ್ರಕಾಶ ದಡ್ಡೆ, ಚಂದ್ರಕಾಂತ ಗಂಗಶೆಟ್ಟಿ, ಸಂಜಯ್ ಜೆಸ್ಸಿ, ಧನರಾಜ ಖೇಣಿ, ನಾಗನಾಥ ಬಿರಾದಾರ ಇದ್ದರು. ಸೂರ್ಯಕಾಂತ ಐನಾಪುರ ನಿರೂಪಿಸಿದರು. ಗೌತಮ ಭೋಸ್ಲೆ ವಂದಿಸಿದರು.