

ಬೀದರ್: ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಇಲ್ಲಿಯ ಹಾರೂರಗೇರಿ ಬಡಾವಣೆಗೆ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಹಾಗೂ ಉಪಾಧ್ಯಕ್ಷೆ ಲಕ್ಷ್ಮಿ ಹಂಗರಗಿ ಭೇಟಿ ನೀಡಿ ಪರಿಶೀಲಿಸಿದರು.
ಬಸವೇಶ್ವರ ವೃತ್ತ ಸಮೀಪದ ರಾಜ ಕಾಲುವೆ ಹೂಳು ತುಂಬಿಕೊಂಡ ಹಾಗೂ ಕೊನೆವರೆಗೂ ನಿರ್ಮಿಸದ ಕಾರಣ ಗುರುವಾರ ಸುರಿದ ಭಾರಿ ಮಳೆಯಿಂದ ಹಾರೂರಗೇರಿ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ. ದವಸ ಧಾನ್ಯ ಸೇರಿದಂತೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಮಳೆ ನೀರು ಬಾವಿಯೊಳಗೂ ಸೇರಿದ್ದರಿಂದ ಕುಡಿಯುವ ನೀರು ಕಲುಷಿತಗೊಂಡಿದೆ. ಜನ ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಹಾರೂರಗೇರಿ ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ಗಮನ ಸೆಳೆದರು.
ಪ್ರತಿ ಸಲವೂ ಅಧಿಕ ಮಳೆ ಸುರಿದಾಗ, ಬಸವೇಶ್ವರ ವೃತ್ತ ಸಮೀಪದ ರೈಲ್ವೆ ಕೆಳಸೇತುವೆಯಲ್ಲಿ ಸಂಗ್ರಹವಾಗುವ ರಾಜು ಕಾಲುವೆಯ ನೀರು ಬಡಾವಣೆಯೊಳಗೆ ಬರುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ಹಿಂದೆ ಈಶ್ವರ ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ಸಮಸ್ಯೆ ಕುರಿತು ಗಮನ ಸೆಳೆಯಲಾಗಿತ್ತು. ಅವರು ಬಸವೇಶ್ವರ ವೃತ್ತದಿಂದ ಹಾರೂರಗೇರಿವರೆಗೆ ರಾಜ ಕಾಲುವೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದರು ಎಂದು ತಿಳಿಸಿದರು.
ಕೂಡಲೇ ರಾಜ ಕಾಲುವೆಯೊಳಗಿನ ಹೂಳು ಎತ್ತಬೇಕು. ನೀರು ಹರಿದು ಹೋಗಲು ರಾಜ ಕಾಲುವೆ ಗೋರನಳ್ಳಿ ಅಂತ್ಯದವರೆಗೂ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷ ಮಹ್ಮಮದ್ ಗೌಸ್ ಅವರು, ಕೂಡಲೇ ರಾಜ ಕಾಲುವೆ ಹೂಳೆತ್ತಲಾಗುವುದು. ಬಳಿಕ ಗೋರನಳ್ಳಿ ವರೆಗೆ ಕಾಲುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಆಯುಕ್ತರು, ಸದಸ್ಯ ದಿಗಂಬರ್ ಮಡಿವಾಳ್, ಪ್ರಮುಖರಾದ ಬಸವರಾಜ ಅಂಬಾಜಿ, ಅಶೋಕ ಹೊಕ್ರಾಣೆ, ಧನರಾಜ ಚಿಮಕೋಡೆ, ಮಲ್ಲಿಕಾರ್ಜುನ ಬಂತೆ, ವಿಶ್ವನಾಥ ಕಾಜಿ, ಶರಣಪ್ಪ ಉಪ್ಪೆ, ಆಕಾಶ ಕಾಜಿ, ಹಣಮಂತ ಬುಳ್ಳಾ, ಭೀಮರಾವ್ ಪಾಟೀಲ, ಪ್ರಕಾಶ ಕಾಜಿ ಮೊದಲಾದವರು ಇದ್ದರು.