

ಬೀದರ್: 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಷಯವಾರು ಶೇ 100ಕ್ಕೆ 100 ರಷ್ಟು ಫಲಿತಾಂಶ ದಾಖಲಿಸಿದ ಬೀದರ್ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ 50 ಶಿಕ್ಷಕರನ್ನು ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ಹಾಗೂ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಶಿಕ್ಷಕರಿಗೆ ಶಾಲು ಹೊದಿಸಿ, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಗುಣಮಟ್ಟದ ಬೋಧನೆಯಿಂದ ಮಾತ್ರ ವಿಷಯವಾರು ಶೇ 100 ಕ್ಕೆ 100 ರಷ್ಟು ಫಲಿತಾಂಶ ದಾಖಲಿಸಲು ಸಾಧ್ಯವಾಗುತ್ತದೆ ಎಂದು ರಹೀಂಖಾನ್ ತಿಳಿಸಿದರು.
ಬೀದರ್ ತಾಲ್ಲೂಕಿನಲ್ಲಿ ಈ ಬಾರಿ ಅನೇಕ ಶಾಲೆಗಳ ಶಿಕ್ಷಕರು ಶೇ 100 ರಷ್ಟು ಫಲಿತಾಂಶದ ಸಾಧನೆ ಮಾಡಿದ್ದಾರೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಶಿಕ್ಷಕರು ಈ ಸಾಧನೆಗೆ ಸಂಕಲ್ಪ ತೊಡಬೇಕು ಎಂದು ಸಲಹೆ ಮಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿಯ ಅಪರ ಆಯುಕ್ತರ ಕಚೇರಿಯ ಸಹ ನಿರ್ದೇಶಕ ಎಚ್.ಸಿ. ಚಂದ್ರಶೇಖರ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ಫುರಖಾನ್, ಡಯಟ್ ಉಪ ಪ್ರಾಚಾರ್ಯ ಮಹಮ್ಮದ್ ಗುಲ್ಶಿನ್, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶೇಕ್ ಮಹೆಬೂಬ್ ಪಟೇಲ್, ಬಿಇಒ ಅಖಿಲಾಂಡೇಶ್ವರಿ ಮುಖ್ಯ ಅತಿಥಿಯಾಗಿದ್ದರು.
ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷಕುಮಾರ ಚಲುವಾ ಅಧ್ಯಕ್ಷತೆ ವಹಿಸಿದ್ದರು. ಧನರಾಜ ಗುಡಮೆ, ಡಿ. ಜಾಕೀರ್ ಹುಸೇನ್, ಜೀತೇಂದ್ರ ಬಿರಾದಾರ, ಎಡಿಸನ್ ಜೋಸೆಫ್, ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷೆ ಅರ್ಷಿಯಾ ಜಬೀನ್, ಕಾರ್ಯದರ್ಶಿ ಗಣೇಶ ಬಿರಾದಾರ, ರಾಜ್ಯ ಪರಿಷತ್ ಸದಸ್ಯ ಎಂ.ಡಿ. ಮುಕ್ರಮ, ಪಾಂಡುರಂಗ ಬೆಲ್ದಾರ್, ವೈಜಿನಾಥ ಸಾಳೆ, ಕಲಾಲ್ ದೇವಿಪ್ರಸಾದ್ ಇದ್ದರು.
ಬಸಪ್ಪ ಪೂಜಾರಿ ನಿರೂಪಿಸಿದರು. ಮಹಮ್ಮದ್ ತಾಜೊದ್ದಿನ್ ಸ್ವಾಗತಿಸಿದರು. ಚಿದಂಬರೇಶ್ವರಿ ವಂದಿಸಿದರು.