ಶಿಕ್ಷಣ ಸಚಿವರ ಜತೆ ಚರ್ಚೆ

Private School Sangh Memorandum Photo
Published on

ಬೀದರ್: ಖಾಸಗಿ ಶಿಕ್ಷಣ ಸಂಸ್ಥೆಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ಶೀಘ್ರ ಶಿಕ್ಷಣ ಸಚಿವರ ಜತೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ನಗರದ ಪ್ರತಾಪನಗರದ ಜನಸೇವಾ ಶಾಲೆ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ಸಂಘದ ವಿವಿಧ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆ ಅನುಮತಿ ನವೀಕರಣ, ಹೊಸ ಶಾಲೆ ಆರಂಭ ನಿಯಮ ಸಡಿಲಿಕೆ, 2015 ರ ವರೆಗಿನ ಶಾಲೆಗಳ ಅನುದಾನಕ್ಕೆ ಒಳಪಡಿಸುವಿಕೆ, ಸ್ಥಿರ ಮೊತ್ತ ಕಡಿತ ಬೇಡಿಕೆಗಳ ಬಗ್ಗೆ ಸಚಿವರ ಗಮನ ಸೆಳೆಯಲಾಗುವುದು. ಆರ್.ಟಿ.ಇ. ಮರು ಜಾರಿ ಬೇಡಿಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಶೇ 25 ರಷ್ಟನ್ನು ಶಿಕ್ಷಣಕ್ಕೆ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ವಿವಿಧ ನಿಯಮಗಳಿಂದಾಗಿ ಅನುಭವಿಸುತ್ತಿರುವ ಸಂಕಷ್ಟವನ್ನು ಬಿಡಿಸಿಟ್ಟರು.
ನೂರೆಂಟು ಷರತ್ತುಗಳ ಕಾರಣ ಖಾಸಗಿ ಶಾಲೆಗಳು ಪ್ರತಿ ವರ್ಷ ಅನುಮತಿ ನವೀಕರಣಕ್ಕೆ ತೊಂದರೆ ಅನುಭವಿಸಬೇಕಾಗಿದೆ. ಹೊಸ ಶಾಲೆ ಆರಂಭ ಸಾಹಸದ ಕೆಲಸವೇ ಆಗಿದೆ. ಸ್ಥಿರ ಮೊತ್ತದಲ್ಲಿ ಹತ್ತು ಪಟ್ಟು ಏರಿಕೆ ಮಾಡಿರುವುದು ಆರ್ಥಿಕ ಹೊರೆ ಉಂಟು ಮಾಡಿದೆ. ನಾನಾ ಸಮಸ್ಯೆಗಳ ಮಧ್ಯೆಯೂ ನಡೆಸಿಕೊಂಡು ಬರುತ್ತಿರುವ ಖಾಸಗಿ ಕನ್ನಡ ಶಾಲೆಗಳ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಕಲ್ಪಿಸದಿದ್ದರೆ ಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳಿಗೆ ಸುಲಭವಾಗಿ ಅನುಮತಿ ಕೊಡಬೇಕು. ಅನುಮತಿ ನವೀಕರಣ ಸರಳಗೊಳಿಸಬೇಕು. ಬಡ ಮಕ್ಕಳ ಹಿತದೃಷ್ಟಿಯಿಂದ ರದ್ದುಪಡಿಸಲಾದ ಆರ್‍ಟಿಇ ಮರು ಜಾರಿಗೊಳಿಸಬೇಕು. 1995 ರವರೆಗಿನ ಖಾಸಗಿ ಶಾಲೆಗಳನ್ನು ಮಾತ್ರ ಅನುದಾನಕ್ಕೆ ಒಳಪಡಿಸಲಾಗಿದ್ದು, 2015 ರ ವರೆಗಿನ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಸ್ಥಿರ ಮೊತ್ತ ಹಿಂದಿನಂತೆ ಮುಂದುವರಿಸಬೇಕು ಎಂದು ಬೇಡಿಕೆ ಮಂಡಿಸಿದರು.
ನಗರಸಭೆಯವರು ವಾಣಿಜ್ಯ ಕಟ್ಟಡ ಮಾದರಿಯಲ್ಲಿ ಶಾಲೆಗಳಿಗೆ ಶುಲ್ಕ ವಿಧಿಸುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು.
ಇದಕ್ಕೆ ಸ್ಪಂದಿಸಿದ ಸಭೆಯಲ್ಲಿದ್ದ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಅವರು, ರಿಯಾಯಿತಿ ಶುಲ್ಕ ವಿಧಿಸಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಮಣಗೀರೆ, ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂದೀಪ್ ಶೆಟಕಾರ್, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜು ಶೆಟಕಾರ್, ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ಧನರಾಜ ದೊಡ್ಡಮನಿ, ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಸೈಯದ್ ಅಹಮ್ಮದ್, ಬೀದರ್ ನಗರ ಘಟಕದ ಅಧ್ಯಕ್ಷ ಮಹಮ್ಮದ್ ಸಲೀಂ, ಅನೂಪ್ ಪಾಠಕ್, ಶಾಂತವೀರ, ಸಂಜು ಕಂಟಾಳೆ, ಗಣಪತಿ ಸೋಲಪುರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು. ಜಿಲ್ಲೆಯ 200 ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net