

ಬೀದರ್: ಜಂಗಮ ವಟುಗಳಿಗೆ ಸಾಮೂಹಿಕ ಅಯ್ಯಾಚಾರ(ಶಿವದೀಕ್ಷೆ) ಹಾಗೂ ವೀರಶೈವರಿಗೆ ಲಿಂಗ ದೀಕ್ಷೆ ಕಾರ್ಯಕ್ರಮ ಇಲ್ಲಿಯ ಅಲ್ಲಮಪ್ರಭು ನಗರದ ತ್ರಿಕೂಟ ಭವನದಲ್ಲಿ ಶ್ರದ್ಧೆ, ಭಕ್ತಿಯಿಂದ ಜರುಗಿತು.
ಹುಡಗಿ ಮಠದ ವಿರೂಪಾಕ್ಷ ಶಿವಾಚಾರ್ಯರು ಅಯ್ಯಾಚಾರ ಹಾಗೂ ಲಿಂಗ ದೀಕ್ಷೆ ನೀಡಿದರು.
ಸಂಸ್ಕಾರದಿಂದ ಮಾತ್ರ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯವಿದೆ. ಹೀಗಾಗಿ ವೀರಶೈವ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು. ಧರ್ಮದ ಮಾರ್ಗ ತೋರಬೇಕು ಎಂದು ಹೇಳಿದರು.
ಆಧುನಿಕ ಯುಗದಲ್ಲಿ ಸನಾತನ ಧರ್ಮ, ಪರಂಪರೆಯನ್ನು ಮರೆಯುತ್ತಿರುವುದು ಕಳವಳಕಾರಿ. ಸಂಸ್ಕಾರಕ್ಕೆ ಒತ್ತು ಕೊಡದಿದ್ದರೆ ಪ್ರತಿ ಓಣಿಯಲ್ಲೂ ವೃದ್ಧಾಶ್ರಮಗಳು ತಲೆ ಎತ್ತುವ ದಿನಗಳು ದೂರವಿಲ್ಲ ಎಂದು ಹೇಳಿದರು.
ಜಂಗಮರು ತಮ್ಮ ಮಕ್ಕಳಿಗೆ ಅಯ್ಯಾಚಾರ ದೀಕ್ಷೆ ಕೊಟ್ಟು, ಸಮಾಜಕ್ಕೆ ಸಂಸ್ಕಾರ ನೀಡಲು ಮುಂದೆ ಬರಬೇಕು ಎಂದು ತಿಳಿಸಿದರು.
ಶಿವಯ್ಯ ಸ್ವಾಮಿ ಅವರು ಸಾಮೂಹಿಕ ಅಯ್ಯಾಚಾರ ಹಾಗೂ ಲಿಂಗ ದೀಕ್ಷೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ವಿಘ್ನೇಶ ಸ್ವಾಮಿ ಸೇರಿ ಅನೇಕರು ಅಯ್ಯಾಚಾರ ಹಾಗೂ ವೀರಶೈವರು ಲಿಂಗದೀಕ್ಷೆ ಪಡೆದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಚಾಮುಂಡೇಶ್ವರಿ ಸ್ವಾಮಿ, ತೋಟಗಾರಿಕೆ ಕಾಲೇಜು ಪ್ರಾಧ್ಯಾಪಕ ಶ್ರೀನಿವಾಸ ಎನ್.ಎಂ, ಜಿಲ್ಲಾ ಜಂಗಮ ಸಮಾಜದ ಕಾರ್ಯದರ್ಶಿ ವರದಯ್ಯ ಸ್ವಾಮಿ, ಪ್ರಮುಖರಾದ ಮಹಾಲಿಂಗ ಸ್ವಾಮಿ, ಪ್ರವೀಣ ಸ್ವಾಮಿ, ಕೈಲಾಸ ಗೋರಮೆ, ಶಿವಶಂಕರ ಬೆಳಮಗಿ, ನಾಗಯ್ಯ ಸ್ವಾಮಿ, ವೀರಯ್ಯ ಸ್ವಾಮಿ, ಶಾಂತಯ್ಯ ಸ್ವಾಮಿ, ರೇವಣಸಿದ್ದಯ್ಯ ಸ್ವಾಮಿ, ಮೊದಲಾದವರು ಇದ್ದರು.