

ಬೀದರ್: ಇಲ್ಲಿಯ ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಪ್ರೌಢಶಾಲೆ ಹಾಗೂ ಏಕಲವ್ಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸೈಯದ್ ಸಲಾವೊದ್ದಿನ್, ನೀತಾ ಬಡಿಗೇರಿ ಸೇರಿದಂತೆ 15 ಮಂದಿಗೆ ಪ್ರಶಸ್ತಿ, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಿಕ್ಷಕ ವೃತ್ತಿ ಬಹಳ ಪವಿತ್ರವಾಗಿದೆ. ಸದೃಢ ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ ನುಡಿದರು.
ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಅಕ್ಷರ ಕಲಿಸಿದ ಗುರುವನ್ನು ಸದಾಕಾಲ ಗೌರವಿಸಬೇಕು. ಮಹಾ ಪುರುಷರ ಜೀವನ ಚರಿತ್ರೆ ಓದಬೇಕು. ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಲು ಪ್ರಯತ್ನಿಸಬೇಕು ಎಂದು ಕಾರ್ಯಕ್ರಮದ ಆಯೋಜಕ, ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಬಿ. ಜಾನಕನೋರ ಹೇಳಿದರು.
ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಪ್ರೌಢಶಾಲೆ ಮುಖ್ಯಶಿಕ್ಷಕ ಮಹಮ್ಮದ್ ಸಲಾವೊದ್ದಿನ್, ಶಿಕ್ಷಕರು ಇದ್ದರು.