

ಬಸವಕಲ್ಯಾಣ: ಜಮೀನಿನ ಮ್ಯುಟೇಷನ್ ಮತ್ತು ಪಹಣಿಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟ ಕೋಹಿನೂರ ನಾಡ ತಹಸೀಲ್ದಾರ್ ಶಿವಾನಂದ ಬಿರಾದಾರ್ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಶುಕ್ರವಾರ ಸಿಕ್ಕಿಬಿದ್ದಿದ್ದಾರೆ.
ಉಜಳಂಬ ಗ್ರಾಮದ ಸುಧೀರ ದೊಂಬೆ ಅವರ ಜಮೀನಿಗೆ ಸಂಬಂಧಿಸಿದ ಮ್ಯುಟೇಷನ್ ಮತ್ತು ಪಹಣಿ ಕೆಲಸ ಮಾಡಿಕೊಡಲು ಶಿವಾನಂದ 2.50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ನಂತರ ಒಂದು ಲಕ್ಷ ರೂ.ಗೆ ಒಪ್ಪಂದ ಆಗಿದೆ. ಸುಧೀರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಶುಕ್ರವಾರ ನಾರಾಯಣಪುರ ಕ್ರಾಸ್ ಬಳಿ ಒಂದು ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತ ಡಿವೈಎಸ್ಪಿ ಎನ್.ಎಂ. ಓಲೇಕಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಬಳಿಕ ಅವರನ್ನು ತಹಸಿಲ್ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿತು. ತಹಸೀಲ್ದಾರ್ ಶಾಂತಗೌಡ ಬಿರಾದಾರ್, ಪಿಎಸ್ಐ ಅಂಬರೀಶ ವಾಗ್ಮೋಡೆ ಇದ್ದರು.