

ಬೀದರ್: ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸೆ. 17 ರಂದು ಕಲ್ಯಾಣ ಕರ್ನಾಟಕ ಉತ್ಸವದ ಅಮೃತ ಮಹೋತ್ಸವ ಪ್ರಯುಕ್ತ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶಾಲೆಯಲ್ಲಿ ಬೆಳಿಗ್ಗೆ 7.51ಕ್ಕೆ ಜನಸೇವಾ ಪ್ರತಿಷ್ಠಾನದ ಹಿರಿಯ ಸದಸ್ಯ ಬಿ.ಎಸ್. ಕುದರೆ ಧ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 8.30ಕ್ಕೆ ಭಾರತ ಮಾತೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಭಾವಚಿತ್ರ ಹಾಗೂ 75 ಅಡಿ ಉದ್ದದ ರಾಷ್ಟ್ರ ಧ್ವಜದೊಂದಿಗೆ ಎಲ್.ಐ.ಸಿ. ಕಾಲೊನಿ, ಮಾಧವನಗರ ಮತ್ತು ಪ್ರತಾಪನಗರದಲ್ಲಿ ನಡೆಯುವ ಮೆರವಣಿಗೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡುವರು. ಪ್ರಮುಖರಾದ ರಾಜಕುಮಾರ ಬಿಜ್ಜಾ ಪಾಲ್ಗೊಳ್ಳುವರು.
ಬೆಳಿಗ್ಗೆ 9.15ಕ್ಕೆ ಪ್ರತಾಪನಗರದ ಮುಖ್ಯರಸ್ತೆಯಲ್ಲಿ ಇರುವ ಬಸವೇಶ್ವರ ವೃತ್ತದಲ್ಲಿ ವೇದಿಕೆ ಸಮಾರಂಭ ಜರುಗಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಶಿವಕುಮಾರ ಉಪ್ಪೆ ವಿಶೇಷ ಭಾಷಣ ಮಾಡುವರು. ನಗರಸಭೆ ಸದಸ್ಯರಾದ ವೀರಶೆಟ್ಟಿ ಭಂಗೂರೆ ಹಾಗೂ ಮಹಾದೇವಿ ಹುಮನಾಬಾದ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮನವಿ ಮಾಡಿದ್ದಾರೆ.