ವಾಯಾ ಕಲಬುರಗಿಯಿಂದ ರೈಲು ಓಡಿಸಿ

B G Shetkar
Published on

ಬೀದರ್: ಸ್ಥಗಿತಗೊಂಡಿರುವ ಬೀದರ್-ಯಶವಂತಪುರ (ಬೆಂಗಳೂರು) ರೈಲು ವಾಯಾ ಕಲಬುರಗಿ ಮೂಲಕ ಓಡಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಪತ್ರ ಬರೆದಿದ್ದು, ವಾಯಾ ವಿಕಾರಾಬಾದ್ ಬದಲು ಕಲಬುರಗಿ ಮೂಲಕ ಬೆಂಗಳೂರಿಗೆ ರೈಲು ಓಡಿಸಬೇಕು ಎನ್ನುವುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿತ್ತು. ಆದರೆ ಕಲಬುರಗಿ ಜಿಲ್ಲೆಯ ಕೆಲ ತಾಲೂಕುಗಳ ಜನರ ವಿರೋಧದಿಂದ ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ. ಕಲಬುರಗಿ ಮೂಲಕ ರೈಲು ಸಂಚರಿಸಿದರೆ ಈ ಭಾಗದ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗುತ್ತದೆ. 2-3 ಗಂಟೆ ಸಮಯವೂ ಉಳಿತಾಯವಾಗುತ್ತದೆ. ಹೀಗಾಗಿ ಜನರ ಹಿತದೃಷ್ಟಿ ಮತ್ತು ಪ್ರವಾಸೋದ್ಯಮ ಬೆಳವಣಿಗೆಯ ದೃಷ್ಟಿಕೋನದಿಂದ ರೈಲು ಕಲಬುರಗಿ ಮೂಲಕ ಸಂಚರಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net