

ಬೀದರ್: ನಗರದ ಪಾಪನಾಶ ಶಿವಲಿಂಗ ದೇವಸ್ಥಾನದ ಭಜನಾ ಮಂಡಳಿ ನೇತೃತ್ವದಲ್ಲಿ ಭಕ್ತರು ಸೋಮವಾರ ಕಾವಡ ಯಾತ್ರೆ ನಡೆಸಿದರು.
ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಾವಡ ಯಾತ್ರೆ ನಡೆದಿದೆ. ಶ್ರಾವಣ ಮಾಸ ನಿಮಿತ್ತ ಮೊದಲ ಸೋಮವಾರದಿಂದ ನಿರಂತರ ನಾಲ್ಕು ಸೋಮವಾರ ಕಾವಡ ಯಾತ್ರೆ ಜರುಗಿತು. ಕೊನೆಯ ಸೋಮವಾರ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿಯಲ್ಲಿ ಮಿಂದೆದ್ದರು.
ಭಾಲ್ಕಿ ತಾಲೂಕಿನ ಗಾಯಮುಖದ ಶ್ರೀ ಗುಪ್ತಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಮಡಿ ಸ್ನಾನ ಮಾಡಿ ಕೇಸರಿ ಬಟ್ಟೆ ಧರಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಂದಿಗೆಗಳಲ್ಲಿ ಅಲ್ಲಿನ ಪವಿತ್ರ ನೀರು ಸಂಗ್ರಹಿಸಿ ಕಟ್ಟಿಗೆಯ ಎರಡು ಭಾಗಕ್ಕೆ ಕಟ್ಟಿಕೊಂಡು ಬೀದರ್-ಭಾಲ್ಕಿ ಹೆದ್ದಾರಿ ಮೂಲಕ ಹೆಜ್ಜೆ ಹಾಕಿದರು. ಮಹಿಳೆಯರು, ಹಿರಿಯ ನಾಗರಿಕರು ಸೇರಿ ಎಲ್ಲ ವಯೋಮಾನದವರು ಭಾಗವಹಿಸಿದ್ದರು. ಗಾಯಮುಖದಿಂದ 16 ಕಿಮೀ ಕಾಲ್ನಡಿಗೆಯಲ್ಲಿ ಆಗಮಿಸಿ ಪವಿತ್ರ ನೀರಿನಿಂದ ಪಾಪನಾಶ ಶಿವಲಿಂಗಕ್ಕೆ ಅಭಿಷೇಕ ಮಾಡಿ ಯಾತ್ರೆ ಕೊನೆಗೊಳಿಸಿದರು.
ಪಾಪನಾಶ ದೇವಸ್ಥಾನ ಭಜನಾ ಮಂಡಳಿ ಅಧ್ಯಕ್ಷ ಶಿವಕುಮಾರ ಶೆಟಕಾರ, ಪ್ರಮುಖರಾದ ಸಂತೋಷ ಜಗದಾಳೆ ಬಾವಗಿ, ಅರವಿಂದ, ಶಿವಾನಂದ ಪಾಟೀಲ್, ಮಹೇಶ ಪಾಟೀಲ್, ಧೂಳಪ್ಪ, ರೇವಪ್ಪರಡ್ಡಿ, ಸುವಣರ್ಾ, ಅಶ್ವಿನಿ, ಕವಿತಾ ಸ್ವಾಮಿ, ಸಿಂಧು, ಸವಿತಾ ಹೆಗ್ಗೆ, ಪದ್ಮಾವತಿ, ವಿದ್ಯಾವತಿ ಮಾಯಕೊಡೆ, ಲತಾ ಸಂಗೋಳಗಿ, ವಿಜಯಲಕ್ಷ್ಮೀ, ಸರಸ್ವತಿ, ರಾಜಕುಮಾರ ಸ್ವಾಮಿ, ಜ್ಞಾನೇಶ್ವರ, ಬಸವರಾಜ ಶೀಲವಂತ, ಅವಿನಾಶ ಶೀಲವಂತ, ಸಂಗಮೇಶ ದಾನಾ ಇತರರಿದ್ದರು.