ಸರ್ಕಾರಿ ಕಚೇರಿಗಳಲ್ಲಿ ಸಸಿ ನೆಡಿ

Govt Employees Sangh Photo (1)
Published on

ಬೀದರ್: ನಗರದ ಸರ್ಕಾರಿ ಕಚೇರಿ, ಶಾಲೆ ಹಾಗೂ ಕಾಲೇಜುಗಳಲ್ಲಿ ಸಸಿಗಳನ್ನು ನೆಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.
ಸಂಘದ ಪದಾಧಿಕಾರಿಗಳು ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರ ನೇತೃತ್ವದಲ್ಲಿ ನಗರದಲ್ಲಿ ಅರಣ್ಯ, ಪರಿಸರ, ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿ, ಡಯಟ್, ಸರ್ಕಾರಿ ಪಾಲಿಟೆಕ್ನಿಕ್, ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ, ಶಾಲೆ ಮತ್ತು ಕಾಲೇಜು ಆವರಣದಲ್ಲಿ ಸಸಿ ನೆಡಬೇಕು ಎಂದು ಬೇಡಿಕೆ ಇಟ್ಟರು.
ಕಲ್ಯಾಣ ಕರ್ನಾಟಕದಲ್ಲೇ ಜಿಲ್ಲೆ ತಂಪು ಪ್ರದೇಶವಾಗಿದೆ. ತಾವು ಅರಣ್ಯ ಸಚಿವರಾದ ನಂತರ ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣೆ ಹಾಗೂ ಸಸಿ ನೆಡುವ ಕಾರ್ಯ ಭರದಿಂದ ನಡೆಯುತ್ತಿದೆ. ಮಳೆ ಚೆನ್ನಾಗಿ ಬರುತ್ತಿರುವ ಕಾರಣ ಸುಂದರ ಹಾಗೂ ಹಸಿರು ಬೀದರ್ ನಿರ್ಮಾಣದ ಭಾಗವಾಗಿ ರಸ್ತೆ ವಿಭಜಕಗಳ ಮಧ್ಯೆ ಸಹ ಸಸಿಗಳನ್ನು ನೆಡುವ ಅಗತ್ಯವಿದೆ ಎಂದು ಸಚಿವರ ಗಮನ ಸೆಳೆದರು.
ಚಿಟ್ಟಾ ಕ್ರಾಸ್‍ನಿಂದ ಅಮಲಾಪುರ, ಗುಂಪಾ ವೃತ್ತದಿಂದ ಶಹಾಪುರ ಗೇಟ್-ಚಿದ್ರಿ, ಗುರುನಾನಕ ಎಂಜಿನಿಯರಿಂಗ್ ಕಾಲೇಜು ರಸ್ತೆ, ಕುಂಬಾರವಾಡ ಕಮಾನ್‍ನಿಂದ ಎಸ್.ಪಿ. ಮನೆ, ಜೇಲ್ ಕಾಲೊನಿಯಿಂದ ಚಿಕ್ಕಪೇಟೆವರೆಗಿನ ರಸ್ತೆ ವಿಭಜಕದ ಮಧ್ಯೆ ಸಸಿಗಳನ್ನು ನೆಡಬೇಕು ಎಂದು ಕೋರಿದರು.
ಅಧಿಕ ಸಸಿಗಳನ್ನು ನೆಡುವುದರಿಂದ ಪರಿಸರ ಉತ್ತಮವಾಗಿರಲಿದೆ. ಸಕಾಲಕ್ಕೆ ಮಳೆಯಾಗಲಿದೆ. ಜಿಲ್ಲೆ ಹಸಿರು ಜಿಲ್ಲೆಯಾಗಲಿದೆ ಎಂದರು.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net