ಸಾಧನೆಗೆ ಬೇಕು ದೃಢ ಚಿತ್ತ

gurukul
Published on

ಭಾಲ್ಕಿ: ಸ್ಪರ್ಧಾತ್ಮಕ ಯುಗ ಎಲ್ಲವನ್ನೂ ವೇಗವಾಗಿಸಿದೆ. ಎಷ್ಟು ಕಲಿತರೂ ಸಾಲದು ಎಂಬ ಕಾಲಘಟಕ್ಕೆ ಬಂದು ತಲುಪಿದ್ದೇವೆ. ಯಾವುದೇ ರಂಗವಿರಲಿ, ದೃಢ ಚಿತ್ತದಿಂದ ಮುಂದುವರಿದರೆ ಸಾಧನೆಯ ಶಿಖರವೇರಬಹುದು ಎಂದು ಹಿರೇಮಠ ಸಂಸ್ಥಾನದ ಪೀಠಾಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಆಯೋಜಿಸಿದ್ದ ಸಂಗೀತ, ಶಿಕ್ಷಣ, ಕ್ರೀಡಾ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲೇಜಿನಿಂದ ಹೊರ ಬರುವಾಗ ಶಿಕ್ಷಣದ ಸರ್ಟಿಫಿಕೇಟ್ ಜತೆ ಇನ್ನೂ ಅನೇಕ ಕೌಶಲಗಳಿದ್ದರಷ್ಟೇ ಮಣೆ ಎನ್ನುವಂತಾಗಿದೆ. ಹೀಗಾಗಿ ವಿದ್ಯಾರ್ಥಿ ಜೀವನದಿಂದಲೇ ಸಾಧನೆಯತ್ತ ಚಿತ್ತ ಹರಿಸಬೇಕು. ಶಿಕ್ಷಣಕ್ಕೆ ತಕ್ಕ ಉದ್ಯೋಗ ದೊರೆಯದಿದ್ದರೂ ಬದುಕಬಲ್ಲೆ ಎನ್ನುವ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಗಡಿ ಜಿಲ್ಲೆ ಬೀದರಿನ ಲತಾ ಮಂಗೇಶ್ಕರ್ ಎಂದೇ ಮನೆಮಾತಾಗಿರುವ ಶಿವಾನಿ ಸ್ವಾಮಿ ಅವರು ಇಂಡಿಯನ್ ಐಡೋಲ್ ಸೀಸನ್ 14ಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ವಿಷಯ. ಶಿಕ್ಷಣ ಕ್ಷೇತ್ರದಲ್ಲಿ ಗುರುಕುಲ ವಿದ್ಯಾರ್ಥಿಗಳಾದ ಸಂತೋಷಿ, ಸುದೀಪ ರಾಷ್ಟ್ರಮಟ್ಟದ ಪರೀಕ್ಷೆ ಎನ್ಡಿಎನಲ್ಲಿ ಪಾಸ್ ಜತೆಗೆ ಪ್ರಾಥಮಿಕ ಶಾಲೆ ಕ್ರೀಡಾಪಟುಗಳ ಖೋಖೋ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂಬುದನ್ನು ಸಾರಿ ಹೇಳುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಆತ್ಮವಿಶ್ವಾಸ, ಗುರಿಯ ಸ್ಪಷ್ಟತೆ, ಸಚ್ಚಾರಿತ್ರ್ಯ, ಧೈರ್ಯ ಇದ್ದರೆ ಅಂದುಕೊಂಡಿದ್ದನ್ನು ಸಾಸಲು ಸಾಧ್ಯ. ಕಠಿಣ ಪರಿಶ್ರಮದ ಫಲವೇ ಸಾಧನೆ. ಗುಣಮಟ್ಟದ ಶಿಕ್ಷಣ ಮೂಲಕ ನಮ್ಮ ಭಾಗವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಶಿಕ್ಷಣ ಕ್ರಾಂತಿ ಕೈಗೊಂಡವರು ಪೂಜ್ಯ ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು, ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಎಂದು ಬಣ್ಣಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಪ್ರಮುಖರಾದ ಕವಿತಾ ಶಿವದಾಸ ಸ್ವಾಮಿ, ಶುಭಾಂಗಿ ಚನ್ನಬಸವ ಬಳತೆ, ಮಲ್ಲಮ್ಮ ನಾಗನಕೇರೆ, ಅಕ್ಷತಾ ಅಷ್ಟೂರೆ, ರಾಮಕೃಷ್ಣನ್ ಸಾಳೆ, ಸಾವಿತ್ರಿ ಧನರಾಜ ಪಾಟೀಲ್, ಸುನೀತಾ ಮಮ್ಮಾ, ಚಂದ್ರಕಲಾ ಡಿಗ್ಗೆ, ಪ್ರಿಯಾ ದಶಮುಖೆ, ಸುವರ್ಣಾ ಬಲ್ಲೂರೆ, ಮಧು ವಾಲೆ, ಪಾರ್ವತಿ ಡೋಣಗಾಪುರೆ, ಲಕ್ಷ್ಮಣ ಮೇತ್ರೆ, ಸಿದ್ರಾಮ ಗೊಗ್ಗಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net