ಲಿಂಗ ಪೂಜೆ ಮಾಡಿದರೆ ಶಿವನೊಲುಮೆ ಸಾಧ್ಯ

30 Shirol 3
Published on

ಶಿರೋಳ: ಭಕ್ತಿ ಕೆಟ್ಟರೆ, ಪುಣ್ಯ ಕೆಡುತ್ತದೆ. ಪುಣ್ಯ ಕೆಟ್ಟರೆ, ಸಕಲವೂ ಕೆಟ್ಟಂತೆ, ಸಂಸಾರ ಕಷ್ಟ ಸುಖಗಳ ಆಗರ, ಜ್ಞಾನ ಇದ್ದವನು ಕಷ್ಟ ಬಂದರೂ ಪಾರಾಗುತ್ತಾನೆ, ಇಷ್ಟಲಿಂಗಧಾರಿಗಳ ಕಷ್ಟ ಬೇಗ ಪರಿಹಾರವಾಗುತ್ತದೆ ಎಂದು ಚಿತ್ತರಗಿ ಇಳಕಲ್ಲ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಹೇಳಿದರು.

ಗ್ರಾಮದ ತೋಂಟದಾರ್ಯ ಶಾಖಾ ಮಠದ ಗದ್ದುಗೆ ಶಿಲಾಮಂಟಪ ಮತ್ತು ಗೋಪುರ ಕಳಸಾರೋಹಣ ನಿಮಿತ್ತ 26ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮನಸನ್ನು ಹತೋಟಿಯಲ್ಲಿಡುವ ಶಕ್ತಿ ಇಷ್ಟಲಿಂಗಕ್ಕಿದೆ. ಎಲ್ಲರೂ ಇಷ್ಟಲಿಂಗಧಾರಿಗಳಾಗಬೇಕು. ಲಿಂಗ ಪೂಜೆ ಮಾಡಿದರೆ ಶಿವನೊಲುಮೆ ಸಾಧ್ಯವಿದೆ ಎಂದರು.

ಶ್ರೀ ಶಶಿಧರ ಶಾಸ್ತ್ರೀಗಳು ಬಸವ ಪುರಾಣದ ಪ್ರವಚನ ನೀಡಿ, ಮಾತು ಹಿತ-ಮಿತವಾಗಿರಲಿ. ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು. ನಾವಾಡುವ ಮಾತು ಲೋಕ ಮೆಚ್ಚುವಂತಿರಬೇಕು ಎಂದರು.

ಶ್ರೀ ಶಾಂತಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಬುತ್ತಿ ಸೇವೆ ಮಾಡಿದ ಶಿರೋಳದ ಜನತಾ ಪ್ಲಾಟನ ಶ್ರೀವೀರಭದ್ರೇಶ್ವರ ಓಣಿಯ ಭಕ್ತರನ್ನು ಸನ್ಮಾನಿಸಿದರು. ವಿ.ಕೆ. ಮರೆಗುದ್ದಿ, ಶಿವಾನಂದ ಯಲಿಬಳ್ಳಿ, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡಮನಿ, ಶಿವಪ್ಪ ಹುಳ್ಳಿ, ನಾಗನಗೌಡ ತಿಮ್ಮನಗೌಡ್ರ, ಉಪಾಧ್ಯಕ್ಷ ಗುರುಬಸವ ಶೆಲ್ಲಿಕೇರಿ,ಇದ್ದರು. ಮಹಾಬಳೇಶ್ವರಪ್ಪ ಕೋಡಬಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net