ಪ್ರಕೃತಿ ಆರಾಧನೆ ಮಾಡಿದರೆ ಪರಿಸರ ಸಂರಕ್ಷಣೆ ಮಾಡಿದಂತೆ: ರತ್ನ ಯತೀಶ್

couvery arathi
Published on

ಕುಶಾಲನಗರ: ನಮ್ಮ ಸುತ್ತಮುತ್ತಲ ಪ್ರಕೃತಿಯನ್ನು ಆರಾಧನೆ ಮಾಡುವ ಮೂಲಕ ನದಿ ಪರಿಸರಗಳನ್ನು ಸಂರಕ್ಷಿಸಲು ಸಾಧ್ಯ ಎಂದು ಕೊಡಗು ಜಿಲ್ಲಾ ಸೌಂದರ್ಯ ತಜ್ಞರ ಜಿಲ್ಲಾ ಸಂಘದ ಅಧ್ಯಕ್ಷೆ ರತ್ನ ಯತೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶಯದಲ್ಲಿ ನಮಾಮಿ ಕಾವೇರಿ ಸಹಯೋಗದೊಂದಿಗೆ ಬುದ್ಧ ಪೂರ್ಣಿಮೆ ಸಂದರ್ಭ ಇತ್ತೀಚೆಗೆ ನಡೆದ ೧೭೨ನೇ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದಕ್ಷಿಣ ಭಾರತದ ಜೀವನದಿ ಎನಿಸಿರುವ ಕಾವೇರಿಗೆ ನಮಿಸುವ ಕಾರ್ಯದೊಂದಿಗೆ ನದಿ ಸಂರಕ್ಷಣೆ ಕೆಲಸ ನಿರಂತರವಾಗಿ ಸಾಗಬೇಕಾಗಿದೆ ಎಂದರು.

ನಿವೃತ್ತ ಪ್ರಾಧ್ಯಾಪಕರು ಹಾಗೂ ಪತ್ರಕರ್ತ ಸಬಲಂ ಭೋಜಣ್ಣ ರೆಡ್ಡಿ ಮಾತನಾಡಿ, ಕಾವೇರಿ ಆರತಿ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಸಾಧ್ಯ. ಎಂದರಲ್ಲದೆ, ಸರಕಾರದ ಮೂಲಕ ಸಹ ಜಿಲ್ಲೆಯ ಆಯ್ದ ಭಾಗಗಳಲ್ಲಿ ಕಾವೇರಿ ಆರತಿ ನಡೆಸುವಂತಾಗಬೇಕು. ರಾಜ್ಯ ಸರ್ಕಾರ ಇತ್ತೀಚೆಗೆ ತೀರ್ಮಾನ ಮಾಡಿರುವ ಶ್ರೀರಂಗಪಟ್ಟಣದ ಸಮೀಪ ಕಾವೇರಿ ನದಿಗೆ ಆರತಿ ಮಾಡುವ ಕಾರ್ಯಕ್ರಮಕ್ಕೆ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಈಗಾಗಲೇ ಎಷ್ಟೋ ವರ್ಷಗಳಿಂದ ಕುಶಾಲನಗರದ ಕಾವೇರಿ ನದಿ ತೀರದಲ್ಲಿ ಪ್ರತಿ ಹುಣ್ಣಿಮೆಗೆ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿಯ ಕಾರ್ಯಕ್ರಮವನ್ನೇ ಸರ್ಕಾರ ಮಾದರಿಯಾಗಿ ಅನುಸರಿಸಿದರೆ ಅಷ್ಟೊಂದು ಹಣ ವೆಚ್ಚ ಮಾಡಬೇಕಾದ ಅವಶ್ಯಕತೆ ಬರುವುದಿಲ್ಲ. ಆ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಕೂಡ ಶಾಶ್ವತ ಪರಿಹಾರ ಕಾಣಲು ಸಾಧ್ಯ ಎಂದರು.

ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕಾವೇರಿ ನದಿ ಸಂರಕ್ಷಣೆಯ ಕಾರ್ಯಗಳಲ್ಲಿ ತೊಡಗಿರುವ ಬಳಗದ ಯಶಸ್ವಿ ಕಾರ್ಯಕ್ರಮದ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು, ಕುಂಕುಮಾರ್ಚನೆ ಅಷ್ಟೋತ್ತರ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕರಾದ ಚಂದ್ರಮೋಹನ್ ನದಿ ಜಲಮೂಲಗಳ ಸಂರಕ್ಷಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ನಮಾಮಿ ಕಾವೇರಿ ತಂಡದ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಧರಣಿ ಸೋಮಯ್ಯ, ನಿವೃತ್ತ ಪ್ರಾಂಶುಪಾಲ ಕೆಂಚಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ದೀಪ ಪೂಜಾರಿ, ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ, ಕಾರ್ಯದರ್ಶಿ ಆರ್.ಕುಮಾರ್ ಯೋಗೇಶ್, ಮುರಳಿ, ಎಚ್.ಎಂ.ಗಣೇಶ್, ರೂಪ ಗಣೇಶ್, ದಿವ್ಯ ಅನಿಲ್, ಕಲ್ಪನಾ, ಸಂದೀಪ್ ಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net