

ಹೊಳೆನರಸೀಪುರ: ಪಟ್ಟಣದ ಓಂಕಾರೇಶ್ವರಸ್ವಾಮಿ, ಶ್ರೀ ನೀಲಕಂಠೇಶ್ವರಸ್ವಾಮಿ, ಮೈಲಾರಲಿಂಗೇಶ್ವರಸ್ವಾಮಿ, ಶ್ರೀ ಲಕ್ಷ್ಮಣೇಶ್ವರಸ್ವಾಮಿ, ಏಕಾಂತ ರಾಮೇಶ್ವರಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ಈಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ವಿಶೇಷ ಪೂಜಾ ಕೈಂಕರ್ಯ ಸಂಪ್ರದಾಯದಂತೆ ವೈಭವದಿಂದ ನೆರವೇರಿತು.
ಪಟ್ಟಣದ ನೀಲಕಂಠೇಶ್ವರಸ್ವಾಮಿ, ಮೈಲಾರಲಿಂಗೇಶ್ವರಸ್ವಾಮಿ ಓಂಕಾರೇಶ್ವರಸ್ವಾಮಿ, ಲಕ್ಷ್ಮಣೇಶ್ವರಸ್ವಾಮಿ, ದೇವಾಲಯದಲ್ಲಿ ಮುಂಜಾನೆ ಬ್ರಾಹ್ಮಿ ಮುಹೂರ್ತ ಹಾಗೂ ರಾತ್ರಿ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಅಲಂಕಾರ ಹಾಗೂ ವಿಶೇಷ ಪೂಜಾ ಕಾರ್ಯ ನೆರವೇರಿತು. ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ದೇವಾಲಯಗಳ ಹಿರಿಯ ಅರ್ಚಕರಾದ ಸುಕುಮಾರ್, ರಾಮಚಂದ್ರ ಭಟ್ಟರು, ಸುಬ್ರಮಣ್ಯ ಮತ್ತು ಆಗಮಿಕರು ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ಸಮರ್ಪಿಸಿದರು.
ತಾಲೂಕಿನ ದೊಡ್ಡ ಕಾಡನೂರಿನ ಬಸವೇಶ್ವರ, ಗುಂಜೇವು ಗ್ರಾಮದ ಮೈಲಾರಲಿಂಗೇಶ್ವರ, ಎಳ್ಳೇಶಪುರದ ಎಳ್ಳುಲಿಂಗೇಶ್ವರ, ಬಾಗಿವಾಳುವಿನ ವೀರಭದ್ರೇಶ್ವರ ಹಾಗೂ ರಾಮೇಶ್ವರ, ಹರದನಹಳ್ಳಿಯ ಈಶ್ವರ ದೇವಾಲಯ, ಉಣ್ಣೇನಹಳ್ಳಿ ಕೊಪ್ಪಲಿನ ಪ್ರಸನ್ನೇಶ್ವರ, ಬಿಚೇನಹಳ್ಳಿಯ ಚಂದ್ರಮೌಳೇಶ್ವರ, ಬೈರವೇಶ್ವರ ಹಾಗೂ ಬಸವೇಶ್ವರ, ಹಳ್ಳಿಮೈಸೂರಿನ ಬಸವೇಶ್ವರ, ನಾಗಲಾಪುರದ ಅಂಕನಾಥೇಶ್ವರ, ಐಚನಹಳ್ಳಿಯ ಬಸವೇಶ್ವರ, ಹಿರೆಬೆಳಗುಲಿಯ ಬಸವೇಶ್ವರ ಹಾಗೂ ಮಲ್ಲೇಶ್ವರ ದೇವಾಲಯ, ಎಸ್.ಅಂಕನಹಳ್ಳಿ, ಮಲ್ಲಪ್ಪನಹಳ್ಳಿ, ಹಾವಿನಮಾರನಹಳ್ಳಿ ಹಾಗೂ ಜವರೀಕೊಪ್ಪಲಿನ ಬೀರಲಿಂಗೇಶ್ವರ ದೇವಾಲಯ ಮತ್ತು ಬಂಡಿಶೆಟ್ಟಿಹಳ್ಳಿಯ ಶ್ರೀ ಶಿವಶರಣ ಹರಳಯ್ಯನವರ ಶ್ರೀ ಕ್ಷೇತ್ರ ಕೊಡುಗಲ್ಲು ಮಠದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ದೇವಾಲಯಗಳನ್ನು ಹೂ, ತಳಿರು ತೋರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಾಲಯಗಳ ಆವರಣದಲ್ಲಿ ಸುಮಂಗಲಿಯರು ರಂಗೋಲಿ ಬಿಟ್ಟು ಭಕ್ತಿಭಾವ ಮೆರೆದರು.