ಮೂಲ ಪ್ರಕೃತಿ ಭಗವಂತನ ಆರಾಧನೆ: ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯ

Sub_God Worship
Published on

ಸುಬ್ರಹ್ಮಣ್ಯ: ದೇವಾಲಯಗಳು ಸಂಸ್ಕಾರ ಬೋಧಿಸುವ ಕೇಂದ್ರಗಳು. ಬ್ರಹ್ಮಕಲಶೋತ್ಸವ ಮೊದಲಾದ ಧಾರ್ಮಿಕ ಆಚರಣೆಗಳು ಭಕ್ತರಲ್ಲಿ ಭಕ್ತಿಯ ಔನ್ನತ್ಯಕ್ಕೆ ಪೂರಕವಾಗುತ್ತದೆ. ಸಂಘಟಿತರಾಗಿ ಭಕ್ತರು ಕಾರ್ಯವೆಸಗಿದಾಗ ವಿರಾಟ್ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುತ್ತದೆ. ಶ್ರದ್ಧಾ ಕೇಂದ್ರಗಳು ಬದುಕಿಗೆ ಉತ್ತಮ ಜ್ಞಾನ ಬೋಧಿಸುವ ಜ್ಞಾನಾಲಯಗಳು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಗುರುವಾರ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮಲ್ಲಿರುವುದು ಮೂಲ ನಂಬಿಕೆ. ಮೂಢನಂಬಿಕೆಯಲ್ಲ. ಹಿಂದು ಸಮಾಜ ಶ್ರೇಷ್ಠವಾದುದು. ಪ್ರಕೃತಿಯ ಆರಾಧನೆ ಮೂಲಕ ಪ್ರಕೃತಿಯನ್ನು ಉಳಿಸಿ ಭಗವಂತನನ್ನು ನಂಬುವುದು ಇಲ್ಲಿಯ ವಿಶೇಷತೆ. ಪ್ರಕೃತಿಯನ್ನು ಉಳಿಸಿ ಭಗವಂತನನ್ನು ನಂಬು ಎಂಬ ಧ್ಯೇಯ ನಮ್ಮ ಹಿರಿಯರಲ್ಲಿತ್ತು. ಪ್ರಕೃತಿಯನ್ನು ಉಳಿಸಿ, ಭಗವಂತನ ನಂಬುವ ದೇಶ ಭಾರತ, ಹಿಂದು ಧರ್ಮ. ದೇವಸ್ಥಾನಗಳಿಗೆ ಜೀರ್ಣೋದ್ಧಾರ ಮಾಡುವ ಜತೆಗೆ ನಮ್ಮ ಮನಸ್ಸು, ಆತ್ಮವೂ ಜೀರ್ಣೋದ್ಧಾರ ಆದಾಗ ಭಗವಂತನ ಆಶೀರ್ವಾದ ನಮ್ಮ ಮೇಲಿರುತ್ತದೆ. ಕೇರ್ಪಡದಲ್ಲಿ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡುವ ಕಾರ್ಯ ಆಗುತ್ತಿರುವುದು ಶ್ಲಾಘನೀಯ ಮತ್ತು ಅಭಿನಂದನೀಯ ಎಂದು ದ.ಕ. ನಿಕಟಪೂರ್ವ ಸಂಸದ ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆ ಅಧ್ಯಕ್ಷ ಚಂದ್ರಶೇಖರ ತಳೂರು, ಎಸ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಗುತ್ತಿಗಾರು ಶ್ರೀ ಮುತ್ತಪ್ಪ ದೈವಸ್ಥಾನದ ಅಧ್ಯಕ್ಷ ವೆಂಕಟ್ ವಳಲಂಬೆ, ಪೆರುವಾಜೆ ದೇವಸ್ಥಾನದ ಮಾಜಿ ಅಧ್ಯಕ್ಷ ಉಮೇಶ್ ಕೆ.ಎನ್., ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ವೆಂಕಪ್ಪ ಗೌಡ ಆಲಾಜೆ, ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ಬೊಳ್ಕಾಜೆ, ಕಾರ್ಯದರ್ಶಿ ಗಿರೀಶ್ ಕೇರ್ಪಡ ಮತ್ತಿತರರು ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಸ್ವಾಗತಿಸಿದರು. ಉಪನ್ಯಾಸಕ ಐತಪ್ಪ ಅಲೆಕ್ಕಾಡಿ ನಿರೂಪಿಸಿದರು. ಬಳಿಕ ಜಯಶ್ರೀ ಉದಯಕುಮಾರ್ ನಾಗಾಜೆ ಅವರಿಂದ ಹರಿಕಥಾ ಕಾಲಕ್ಷೇಪ ನಡೆಯಿತು. ಉದಯ ಕಾನತ್ತೂರ್ ಬೆಂಗಳೂರು ಅವರಿಂದ ಮ್ಯಾಜಿಕ್ ಶೋ, ಮಿಮಿಕ್ರಿ, ಜಗ್ಲಿಂಗ್ ಶೋ ನಡೆಯಿತು.

ವೈದಿಕ ಕಾರ್ಯಕ್ರಮಗಳು

ಗುರುವಾರ ಬೆಳಗ್ಗೆ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಚತುಃಶುದ್ಧಿ, ಧಾರೆ, ಅವಗಾಹ, ಪಂಚಕ ಬಿಂಬ ಶುದ್ಧಿ, ಖನನಾದಿ ಸ್ಥಳಶುದ್ಧಿ, ದ್ವಾರ ಪ್ರಾಯಶ್ಚಿತ ಹೋಮಗಳು, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಹೋಮಗಳ ಕಲಶಾಭಿಷೇಕ, ಮಹಾಪೂಜೆ, ದೀಪಾರಾಧನೆ, ಅಂಕುರಪೂಜೆ, ಕುಂಡ ಶುದ್ಧಿ, ಮಹಾಪೂಜೆ ಪ್ರಸಾದ ವಿತರಣೆ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net