ತಕ್ಷಕ ಪ್ರತಿಷ್ಠಾಪಿತ ನಾಗೇಶ್ವರ ಲಿಂಗಕ್ಕೆ ಪೂಜೆ

29gkn1
Published on

ಗೋಕರ್ಣ: ನಾಗರ ಪಂಚಮಿ ನಿಮಿತ್ತ ಸರ್ಪರಾಜನಾದ ತಕ್ಷಕನಿಂದ ಪ್ರತಿಷ್ಠಾಪಿತವಾದ ಪೌರಾಣಿಕ ಪ್ರಸಿದ್ಧ ನಾಗೇಶ್ವರ ಲಿಂಗಕ್ಕೆ ವಿವಿಧಡೆಗಳಿಂದ ಆಗಮಿಸಿದ ಅಪಾರ ಭಕ್ತರು ಕ್ಷೀರಾಭಿಷೇಕ ಸಲ್ಲಿಸಿ ಕೃತಾರ್ಥರಾದರು.

ಬೆಳಗ್ಗೆ ಐದು ಗಂಟೆಯಿಂದಲೆ ಮಂದಿರದಲ್ಲಿ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಮಳೆಯ ಪ್ರಮಾಣ ಕಡಿಮೆಯಾಗಿ ಬಿಸಿಲಿನ ವಾತಾವರಣದ ಹಿನ್ನೆಲೆಯಲ್ಲಿ ವರ್ಷಕ್ಕಿಂತ ಅತ್ಯಂತ ಹೆಚ್ಚು ಭಕ್ತರು ಪೂಜೆಯಲ್ಲಿ ಭಾಗವಹಿಸಿದರು. ಇದರಿಂದಾಗಿ ನಾಗಬೀದಿಯ ನಾಗೇಶ್ವರ ಮಂದಿರದಿಂದ ಮಹಾಗಣಪತಿ ಮಂದಿರದವರೆಗೆ ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ಬಂದು ಪೂಜೆ ಕೈಗೊಂಡರು.

ಮಂದಿರದ ಒಳ ಮತ್ತು ಹೊರಾಂಗಣದಲ್ಲಿ ಹರಕೆ ಹೊತ್ತ ಭಕ್ತರಿಂದ ಸ್ಥಾಪಿತವಾದ ನೂರಾರು ನಾಗಮೂರ್ತಿಗಳಿಗೆ ಆಸ್ತಿಕರು ಪುರೋಹಿತ ದ್ವಾರಾ ವಿಶೇಷ ಅಭಿಷೇಕ ಮಾಡಿದರು. ಮಂದಿರದ ಪ್ರವೇಶದಲ್ಲಿನ ಸಾವಿರಾರು ವರ್ಷ ಪುರಾತನವಾದ ಅಶ್ವತ್ಥ ವೃಕ್ಷಕ್ಕೆ ಕೂಡ ಪ್ರದಕ್ಷಿಣೆ ಸಲ್ಲಿಸಿ ಹಾಲು ಸಮರ್ಪಿಸಿ ಪೂಜಿಸಲಾಯಿತು.

ಭಕ್ತ ದಟ್ಟಣೆಯಿಂದಾಗಿ ಮಂದಿರಕ್ಕೆ ವಿಶೇಷ ಪೊಲೀಸರನ್ನು ನಿಯೋಜಿಸಲಾಗಿತ್ತು. ಮಂದಿರದ ಹಿರಿಯ ಅರ್ಚಕರಾದ ಕೃಷ್ಣ ಜೋಗಭಟ್ಟ, ಪ್ರಸನ್ನ ಜೋಗಭಟ್ಟ ಮತ್ತು ಕ್ಷೇತ್ರದ ವೈದಿಕರ ನೇತೃತ್ವದಲ್ಲಿ ಮಧ್ಯಾಹ್ನ ಮಹಾಪೂಜೆ ಮತ್ತು ಮಹಾಮಂಗಳಾರತಿ ನೆರವೇರಿತು. ಸಂಜೆ ಕ್ಷೇತ್ರದ ಪದ್ಧತಿಯಂತೆ ಶ್ರೀ ಮಹಾಬಲೇಶ್ವರ ಮಂದಿರದ ವತಿಯಿಂದ ಹಿಲಾಲು-ದೀವಟಿಗೆ ಗೌರವಾರ್ಪಣೆ ಸಲ್ಲಿಕೆಯಾದ ನಂತರ ಸರ್ವಾಲಂಕಾರಗೊಂಡ ನಾಗೇಶ್ವರ ದೇವರಿಗೆ ಸಾಯಂ ಮಹಾಮಂಗಳಾರತಿ ಸಮರ್ಪಿತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net