

ಲಕ್ಷ್ಮೇಶ್ವರ: ಸಂಪತ್ತಿನ ಒಡತಿ ವರಮಹಾಲಕ್ಷ್ಮೀ ವ್ರತಾಚರಣೆಯನ್ನು ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹಬ್ಬದ ಬೇಕಾದ ಪೂಜಾ ಸಾಮಗ್ರಿಗಳನ್ನು ಗುರುವಾರವೇ ತಂದಿಟ್ಟುಕೊಂಡಿದ್ದರು. ಬೆಳಗ್ಗೆ ಮನೆಯ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣ ಕಟ್ಟಿ, ಅಲಂಕಾರದ ವಸ್ತುಗಳಿಂದ ಮನೆಯನ್ನು ಸಿಂಗರಿಸಿದ್ದರು. ದೇವರ ಜಗುಲಿ ಮತ್ತು ಮುಖ್ಯ ಸ್ಥಳದಲ್ಲಿ ಮಂಟಪ ಸಿದ್ಧಗೊಳಿಸಿ ಹಳದಿ ಹಿಟ್ಟಿನಿಂದ ಮೂಗು, ಕಣ್ಣು, ಕಿವಿ, ಮಾಡಿ ಅದಕ್ಕೆ ಆಭರಣಗಳನ್ನು ಹಾಕಿದ ತೆಂಗಿನ ಕಾಯಿಯಿಂದ ಕಳಸ(ಲಕ್ಷ್ಮೀದೇವಿ) ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದರು.ಪೂಜೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಹಣ್ಣು- ಹೂವು, ಅರಿಷಿಣ- ಕುಂಕುಮ, ಹಸಿರು ರವಿಕೆ ಉಡಿ ತುಂಬಿದ ಬಳಿಕವೇ ಮುತ್ತೈದೆಯರು ಪ್ರಸಾದ ಸ್ವೀಕರಿಸಿದರು.