

ಮೈಸೂರು: ಶ್ರೀಮನ್ನಿರಂಜನ ಗುರುಮಲ್ಲೇಶ್ವರರ 126ನೇ ಪ್ರಮಥರ ಗಣಾರಾಧನೆ ಮತ್ತು ಲಿಂಗೈಕ್ಯ ಶ್ರೀಗುರುಲಿಂಗ ಸ್ವಾಮೀಜಿ ಅವರ 34ನೇ ವಾರ್ಷಿಕ ಗಣಾರಾಧನಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಸೋಮವಾರ ಮೆರವಣಿಗೆ ಆಯೋಜಿಸಲಾಗಿತ್ತು.
ಕುದೇರು ಮಠ ಹಾಗೂ ತೋಂಟದಾರ್ಯ ವಿದ್ಯಾಸಂಸ್ಥೆಯಿಂದ ನಗರದ ಅಗ್ರಹಾರದ ಬಸವೇಶ್ವರ ರಸ್ತೆ ಕುದೇರು ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳ್ಳಿ ರಥದಲ್ಲಿ ‘ಬಸವೇಶ್ವರ ಮೂರ್ತಿ ಹಾಗೂ ಗುರುಮಲ್ಲೇಶ್ವರ ಮೂರ್ತಿ’ ಇರಿಸಿ ಮೆರವಣಿಗೆ ಮಾಡಲಾಯಿತು. ಬಸವೇಶ್ವರ ರಸ್ತೆಯಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತ, ರಾಮಾನುಜ ರಸ್ತೆಯಲ್ಲಿ ಮೆರವಣಿಗೆ ಸಾಗಿತು. ಉತ್ಸವದಲ್ಲಿ ಡೊಳ್ಳು, ನಗಾರಿ, ವಾದ್ಯ, ವೀರಗಾಸೆ, ನಂದಿ ಕಂಬ ಕುಣಿತ ಸಹಿತ ನೂರಾರು ಭಕ್ತರೊಂದಿಗೆ ಸಾಗಿತು.
ಬಳಿಕ ರಾತ್ರಿ ದಿ.ಎನ್.ಲಿಂಗರಾಜೇ ಅರಸ್ ವಿರಚಿತ ‘ದಕ್ಷಯಜ್ಞ ಅಥವಾ ಭೃಗಮುನಿಯ ಗರ್ವಭಂಗ’ ಪೌರಾಣಿಕ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.