ಗೋಕರ್ಣದಲ್ಲಿ ಶ್ರೀ ನಾಗೇಶ್ವರ ಲಿಂಗಕ್ಕೆ ಪೂಜೆ

21gkn1-a NAGESHWAR
Published on

ಗೋಕರ್ಣ: ಪುರಾಣ ಖ್ಯಾತ ಶ್ರೀ ನಾಗೇಶ್ವರ ಮಂದಿರದಲ್ಲಿ ಸರ್ಪ ಮಹಾರಾಜ ತಕ್ಷಕನಿಂದ ಸ್ಥಾಪಿತವಾದ ಶ್ರೀ ನಾಗೇಶ್ವರ ಲಿಂಗಕ್ಕೆ ಅಪಾರ ಭಕ್ತರು ಪೂಜಾಭಿಷೇಕ ಕೈಗೊಂಡು ಪುರೋಹಿತರ ದ್ವಾರ ವಿಶೇಷ ಪ್ರಾರ್ಥನೆ ಮಾಡಿದರು.

ಮಂದಿರದ ಹೊರ ಆವರಣದಲ್ಲಿ ಪ್ರತಿಷ್ಠಾಪಿತವಾಗಿರುವ ನೂರಾರು ನಾಗದೇವತಾ ಮೂರ್ತಿಗಳಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 5 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ಬಂದು ವಾರ್ಷಿಕ ಪೂಜೆ ಕೈಗೊಂಡರು. ಮಧ್ಯಾಹ್ನ 2 ಗಂಟೆಯವರೆಗೂ ಭಕ್ತರು ಭಾರಿ ಸಂಖ್ಯೆಯಲ್ಲಿ ಲಿಂಗವನ್ನು ಅರ್ಚಿಸಿ ಸಂಭ್ರಮಿಸಿದರು.

ಮಂದಿರದ ಪ್ರವೇಶ ದ್ವಾರದಲ್ಲಿನ ಪುರಾತನ ಅಶ್ವತ್ಥ ವೃಕ್ಷಕ್ಕೆ ಹಾಲೆರೆದು ಪ್ರದಕ್ಷಿಣೆ ಸಮರ್ಪಿಸಲಾಯಿತು. ಮಂದಿರದ ಅರ್ಚಕ ವೇ.ಪ್ರಸನ್ನ ಜೋಗಭಟ್ಟ, ವೇ. ಶ್ರೀನಿವಾಸ ಅಡಿ ಭಕ್ತರು ನೆರವೇರಿಸುವ ಪೂಜಾದಿ ವಿವಿಧ ಸಾಂಪ್ರದಾಯಿಕ ವಿಧಿಗಳನ್ನು ನಿರ್ವಹಿಸಿದರು. ಸಂಜೆ ವಿಶೇಷ ಅಲಂಕಾರದಿಂದ ಲಿಂಗವನ್ನು ಶೃಂಗರಿಸಿ ಮಂದಿರದ ಹಿರಿಯ ಅರ್ಚಕ ವೇ. ಕೃಷ್ಣ ಜೋಗಭಟ್ಟ ಮತ್ತಿತರ ವೈದಿಕ ಪ್ರಮುಖರಿಂದ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

ಭಕ್ತರ ದಟ್ಟಣೆ ಹಿನ್ನೆಲೆಯಲ್ಲಿ ಮಂದಿರವಿರುವ ನಾಗಬೀದಿಯಲ್ಲಿ ಎಲ್ಲ ಬಗೆಯ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ನಾಗರ ಪಂಚಮಿ ನಿಮಿತ್ತ ಸಮಸ್ತ ಮಂದಿರಕ್ಕೆ ಹೆಚ್ಚಿನ ದೀಪಾಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net