ಶ್ರೀ ಚಾಮುಂಡೇಶ್ವರಿಯ ಪೂಜಾರಾಧನೆ

SRP_25-02jpg
Published on

ಶ್ರೀರಂಗಪಟ್ಟಣ: ಪಟ್ಟಣ ಹೊರವಲಯದ ಪೂರ್ವವಾಹಿನಿಯ ಚಂದ್ರವನ ಆಶ್ರಮದಲ್ಲಿ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿಯ ಪೂಜಾರಾಧನೆಯೊಂದಿಗೆ ಶಮಿವೃಕ್ಷ ಛೇದನ ಭಕ್ತಿಭಾವದಿಂದ ಜರುಗಿತು.


ಶ್ರೀಮಠದ ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿ ಸಾನ್ನಿಧ್ಯದಲ್ಲಿ ಮಂಗಳವಾರ ಫಲಪ್ರದಾಯಿನಿ ಶ್ರೀಪಾರ್ವತಿದೇವಿ ಪೂಜೆ ಬಳಿಕ ಸಂಜೆ 5.30ರ ಗೋಧೂಳಿ ಲಗ್ನದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಕಾಷ್ಠ ರಥದಲ್ಲಿ ಪ್ರತಿಷ್ಠಾಪಿಸಿ ಮಠದ ಆವರಣದಲ್ಲಿ ರಥೋತ್ಸವ ನೆರವೇರಿಸಲಾಯಿತು.


ಶರನ್ನವರಾತ್ರಿ ಪ್ರಾರಂಭವಾದ ದಿನಗಳಿಂದಲೂ ಶ್ರೀ ತ್ರಿನೇತ್ರ ಸ್ವಾಮೀಜಿ ನಾಡು, ದೇಶದ ಸುಭೀಕ್ಷತೆ ರೈತರ ಏಳಿಗೆ ಸೇರಿದಂತೆ ಸಮಸ್ತ ಲೋಕಕಲ್ಯಾಣಕ್ಕಾಗಿ ಮೌನ ವ್ರತದೊಂದಿಗೆ ಸಂಕಲ್ಪ ಕೈಗೊಂಡು ಶಕ್ತಿ ದೇವತೆಯ ಪೂಜೆಗಳನ್ನು ನಡೆಸಿದ್ದರು. ದಶಮಿಯ ದಿನವಾದ ಮಂಗಳವಾರ ಶನೈಶ್ಚರಸ್ವಾಮಿ ಹಾಗೂ ಫಲಪ್ರದಾಯಿನಿ ಆರಾಧನೆಯೊಂದಿಗೆ ಗೋಪೂಜೆ, ದಂಪತಿಗಳಿಂದ ಪೂಜೆ ಅರ್ಪಿಸಲಾಯಿತು. ಬಳಿಕ ತಮಟೆ, ನಗಾರಿ ಮೇಳದೊಂದಿಗೆ ವೀರಭದ್ರನ ಕುಣಿತದ ಸೇವೆ, ಶ್ರೀ ಚಾಮುಂಡಿ ದೇವಿಯ ಅಪ್ಪಣೆ ಬಳಿಕ ಕದಳಿ ಸಸಿಯೊಂದಿಗೆ ಶಮಿವೃಕ್ಷ ಛೇದನ ನಡೆಸಿ ಶಮಿ ಪತ್ರೆಯನ್ನು ಶುಭ ಹಾರೈಸಿ ಶ್ರೀಗಳು ನೆರದಿದ್ದ ಭಕ್ತರ ವಿತರಿಸಿದರು.


ಇದಕ್ಕೂ ಮೊದಲು ಮಂಗಳವಾರ ಮುಂಜಾನೆ ನವಗ್ರಹಗಳು ಹಾಗೂ ಶನೈಶ್ಚರಸ್ವಾಮಿಗೆ ತಿಲಾಭಿಷೇಕ, ಜೀವನದಿ ಕಾವೇರಿ ಬಾಗಿನ ಅರ್ಪಿಸಿ, ಅಷ್ಟ ಲಕ್ಷ್ಮೀಯರ ಪೂಜೆ, ಹೋಮ ನೇರವೇರಿಸಲಾಗಿತ್ತು. ಬೆಳಗ್ಗೆ ಗೋ ಪೂಜೆ, ಕಾಶಿ ಚಂದ್ರಮೌಳೇಶ್ವರಸ್ವಾಮಿ ವಿಶೇಷ ಪೂಜೆ, ಅಷ್ಟ ಲಕ್ಷ್ಮೀಯರಿಗೆ ರಾಜೋಪಚಾರ ನೆರವೇರಿಸಿದರು.


ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ವಿದುಷಿ ಶಾಂಭವಿಸ್ವಾಮಿ ನೇತೃತ್ವದಲ್ಲಿ ಆಯಾಮ ಅಕಾಡೆಮಿ ವಿದ್ಯಾರ್ಥಿಗಳ ಜನನಿ ನೃತ್ಯ ತಂಡದಿಂದ ಸಂಗೀತ ನಾಟ್ಯ ಪ್ರಸ್ತುತಪಡಿಸಲಾಯಿತು.


ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ದಂಪತಿ ಸಮೇತ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಪುರಸಭಾ ಸದಸ್ಯ ಗಂಜಾಂ ಕೃಷ್ಣಪ್ಪ, ಹಿರಿಯ ಆರ್‌ಟಿಒ ಅಧಿಕಾರಿ ಷಣ್ಮುಖ ಹಡಗದ್, ಆಧ್ಯಾತ್ಮಕಿ ಚಿಂತಕ ಬಸವರಾಜ ಗುರೂಜಿ, ಮಠದ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net