ಸದ್ಗುರು ಶ್ರೀ ಗುರುನಾಥರೂಢ ಸ್ವಾಮೀಜಿ ಪುಣ್ಯಾರಾಧನೆ

new gurunatharudha new
Published on

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ಮೌನಮುನಿ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರ 63ನೇ ಪುಣ್ಯಾರಾಧನೆ ಕಾರ್ಯಕ್ರಮ ಅಂಗವಾಗಿ ಬುಧವಾರದಂದು ಬೆಳಗ್ಗೆ ಉಭಯ ಶ್ರೀಗಳ ಗದ್ದುಗೆಗೆಅಭಿಷೇಕ ಹಾಗೂ ಪೂಜೆ ನೆರವೇರಿತು.

ನಂತರ ಸ್ಥಿತ ಪ್ರಜ್ಞ ಗುರುನಾಥಾರೂಢರು ಎಂಬ ವಿಷಯ ಕುರಿತು ಆಶೀರ್ವಚನೆ ನೀಡಿದ ಶ್ರೀ ಶಿವಾನಂದಭಾರತಿ ಸ್ವಾಮೀಜಿ, ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಬ್ರಹ್ಮನ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಗುರುನಾಥಾರೂಢ ಮಹಾಸ್ವಾಮಿಗಳಿಗೆ ತೋರಿಸಿಕೊಟ್ಟರು. ಗುರುವಿನ ಸೇವೆಯನ್ನು ಭಕ್ತಿ, ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಮಾಡಿದ್ದಾದರೆ ಸದ್ಗುರು ಒಲಿಯುತ್ತಾನೆ ಎಂದರು.

ಕಲಿಯುಗದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಹಾಗೂ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರು ಮಾನವ ಜನ್ಮ ಉದ್ಧಾರಕ್ಕಾಗಿ ಅವತರಿಸಿದ್ದು, ಮುಮುಕ್ಷುಗಳಿಗೆ ಕೇವಲ ನಾಮಸ್ಮರಣೆಯಿಂದಲೆ ಮುಕ್ತಿಯನ್ನು ನೀಡುತ್ತ ಬಂದಿದ್ದಾರೆ. ಆದಕಾರಣ, ಪ್ರತಿಯೊಬ್ಬರೂ ನಿತ್ಯ ನಾಮಸ್ಮರಣೆ ಮಾಡುತ್ತಾ ಸದ್ಗುರುವಿನ ಕೃಪೆಗೆ ಪಾತ್ರರಾಗಿ, ಮನುಷ್ಯ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಶ್ರೀ ಸಚ್ಚಿದಾನಂದ ಸ್ವಾಮೀಜಿ, ಶ್ರೀ ನಾಗೇಶ್ವರ ಸ್ವಾಮೀಜಿ, ಶ್ರೀ ಮಲ್ಲೇಶ್ವರ ಶಿವಶರಣರು, ಶ್ರೀ ಬಸವಾನಂದ ಸ್ವಾಮೀಜಿ, ಶ್ರೀ ಶಾಂತಾನಂದ ಸ್ವಾಮೀಜಿ, ಶ್ರೀ ಆತ್ಮಾನಂದ ಸ್ವಾಮೀಜಿ, ಶ್ರೀ ಕೃಷ್ಣಾನಂದ ಸ್ವಾಮೀಜಿ, ಶ್ರೀ ಭೀಷ್ಮಗೌಡರ ಪಾಟೀಲ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಸದಾನಂದ ಸ್ವಾಮೀಜಿ, ಮಾತೋಶ್ರೀ ಅಮೃತಾನಂದಮಯಿ, ಮಾತೋಶ್ರೀ ಜಾನಮ್ಮ ತಾಯಿ, ಮಾತೋಶ್ರೀ ಲಲಿತಮ್ಮತಾಯಿ, ಮಾತೋಶ್ರೀ ಅರುಣಾ ತಾಯಿ, ಮಾತೋಶ್ರೀ ದಯಾಭಾರತಿ ತಾಯಿ, ಶ್ರೀಮಠದ ಚೇರ್ಮನ್ ಚನ್ನವೀರ ಮುಂಗುರವಾಡಿ, ಧರ್ಮದರ್ಶಿ ಶಾಮಾನಂದ ಪೂಜೇರಿ, ವಿನಾಯಕ ಘೋಡಕೆ, ಡಾ. ಗೋವಿಂದ ಮಣ್ಣೂರ ಹಾಗೂ ಇತರರು ಇದ್ದರು. ನಂತರ ಶ್ರೀ ಗುರುನಾಥರೂಢರ ಪಾಲಕಿಯು ನಗರದಲ್ಲಿ ಸಂಚರಿಸಿ, ಶ್ರೀಮಠಕ್ಕೆ ಮರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net