

ವಿಜಯವಾಣಿ ಸುದ್ದಿಜಾಲ ಧಾರವಾಡ
ಆದಿ ಯೋಗಿ, ಆದಿ ಗುರು ಶಿವನಿಂದ ಪ್ರಾರಂಭವಾದ ಈ ಗುರು ಪರಂಪರೆಯು ಶಿಷ್ಯರ ಉದ್ಧಾರಕ್ಕಾಗಿಯೇ ಇದೆ. ಅಂತಹ ಶ್ರೇಷ್ಠ ಗುರು, ಸದ್ಗುರು, ಜ್ಞಾನಗುರು ನಮ್ಮ ಮಹದೇವ ತಾತ ಎಂದು ಡಾ.ಭಾಗ್ಯಜ್ಯೋತಿ ಹಿರೇಮಠ (ಕೋಟಿಮಠ) ಹೇಳಿದರು.
ನಗರದ ಸೋಮೇಶ್ವರ ಶಾಲ್ಮಲಾ ನದಿ ಉಗಮ ಸ್ಥಾನದಲ್ಲಿರುವ ಶ್ರೀ ಸದ್ಗುರು ಅಲ್ಲಿಪುರದ ಮಹದೇವ ತಾತನವರ 36ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮದ ಅಂಗವಾಗಿ ಶನಿವಾರ ಸಂಜೆ ಏರ್ಪಡಿಸಿದ್ದ ದೀಪಾಲಂಕಾರ ಸೇವೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ತಾತನ ಹೆಸರೊಂದೇ ಸಾಕು ನಮ್ಮ ಭಕ್ತಕೋಟಿಯ ಉದ್ಧಾರಕ್ಕೆ. ತಾತನೆಂಬ ಹೆಸರಿನ ಆ ಒಂದು ಗುರುವಿನ ಸ್ಪರ್ಶದಿಂದ, ದೃಷ್ಟಿಯಿಂದ, ಸ್ಮರಣೆಯಿಂದ, ಅವನ ಕುರಿತಾದ ಪ್ರವಚನದ ಪ್ರಭಾವದಿಂದಲೂ ನಮ್ಮ ಉದ್ಧಾರವಾಗುತ್ತದೆ. ತಾತನ ದಯದಿಂದ ಧನ್ಯರಾದೆವೆಂದು ಮಾತು ಮಾತಿಗೆ ನಾವು ಹೇಳೋಣ ನಮಸ್ಕರಿಸೋಣ ಎಂದರು.
ಪ್ರಸನ್ನಕುಮಾರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ಆನೆಗುಂದಿ, ಸಂತೋಷ ಇಂಗಳಗಿ, ಶಂಕರ ಕುಂಬಿ, ರವಿ ಕಪಲಿ, ಎಂ.ಎಫ್.ಹಿರೇಮಠ, ಇತರರು ಇದ್ದರು. ಶೀತಲ ಜೋಶಿ, ಮೇಧಾ ವಡವಿ ಮತ್ತು ಪ್ರಣಮ್ಯದೇವಿ ಹಿರೇಮಠ ಭರತನಾಟ್ಯ ಪ್ರದಶಿರ್ಸಿದರು.
ಸಿ.ಬಿ.ಜಂಗಣ್ಣವರ ಸ್ವಾಗತಿಸಿದರು. ನಾಗರಾಜ ಗೋಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಲಿಂಗಪ್ಪ ಹೊಸಕೇರಿ ನಿರೂಪಿಸಿದರು.
ಬೆಳಗ್ಗೆ ಷಟ್ಸ್ಥಲ ಧ್ವಜಾರೋಹಣ, ಶ್ರೀ ತಾತನವರ ವಸಂತೋತ್ಸವ, ತೆಪ್ಪೋತ್ಸವ ಸಂಭ್ರಮದಿಂದ ನೆರವೇರಿತು. ಭಾನುವಾರ ಮಹದೇವ ತಾತನವರ ಗದ್ದುಗೆಗೆ ರುದ್ರಾಭಿಷೇಕ, ಅಗ್ನಿಕುಂಡ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಆರಾಧನಾ ಸಮಾರಂಭ ನಂತರ ಸಾಮೂಹಿಕ ವಿವಾಹ ನೆರವೇರಿದವು.
ರಾಯನಾಳದ ಶ್ರೀ ರೇವಣಸಿದ್ದೇಶ್ವರ ಸಂಸ್ಥಾನ ಮಠದ ಅಭಿನವ ರೇವಣಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಾನಂದ ಹರಕುಣಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಸಂಗಮನಾಥ ಲೋಕಾಪುರ, ಇತರರು ಇದ್ದರು.