ಸೆ.1ರಂದು ರಾಯರ ಆರಾಧನೆ

CLK RAYARU 1
Published on

ಚಳ್ಳಕೆರೆ: ವಾಲ್ಮೀಕಿ ನಗರದಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮೀಜಿಗಳ ಮಠದಲ್ಲಿ ಸೆ.1ರ ಶುಕ್ರವಾರ 352ನೇ ಆರಾಧನಾ ಮಹೋತ್ಸವ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.

ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಆ.29ರ ಮಂಗಳವಾರ ಋಗ್ವೇದಿ ನಿತ್ಯ-ನೂತನೋಪಾಕರ್ಮ, ಸೆ.30ರ ಬುಧವಾರ ಯಜುರ್ವೇದಿ ನಿತ್ಯ-ನೂತನೋಪಾಕರ್ಮ ಬಳಿಕ ಬೆಳಗ್ಗೆ 10 ಗಂಟೆಯಿಂದ ಸಾಮೂಹಿಕ ಸತ್ಯ ನಾರಾಯಣ ಪೂಜೆ ನೆರವೇರಲಿದೆ.

ಸೆ.31ರಂದು ಗುರುಗಳ ಪ್ರೇರಣಾನುಸಾರ ಇಲ್ಲಿನ ಬೃಂದಾವನ ಸನ್ನಿಧಾನದಲ್ಲಿ ಪೂರ್ವಾರಾಧನೆ ನಡೆಯಲಿದೆ. ಪೂಜಾ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಗೋಪೂಜೆ, ಪ್ರಾರ್ಥನೋತ್ಸವ, ಶಾಕೋತ್ಸವ, ಧನ-ಧಾನ್ಯ ಪೂಜಾ, ಶ್ರೇಯಃ ಪ್ರಾರ್ಥನೆ ಮತ್ತು ಮಹಾಮಂಗಳಾರತಿ ನಡೆಯಲಿದೆ.

ಸನ್ಮಾನ: ಶ್ರೀರಾಯರ ಬೃಂದಾವನಕ್ಕೆ ರಜತ ಕವಚ ಸಮರ್ಪಣೆ ಸಮಾರಂಭ ಆಯೋಜಿಸಿದ್ದು, ಸಚಿವ ಡಿ. ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net