ನಗರದ ವಿವಿಧೆಡೆ ರಾಘವೇಂದ್ರಸ್ವಾಮಗಳ ಆರಾಧನೆ; ಕಲಿಯುಗ ಕಾಮಧೇನುವಿನ ಸ್ಮರಣೆ

ragha
Published on

ಬೆಂಗಳೂರು : ಕಲಿಯುಗ ಕಾಮಧೇನು, ಕಲ್ಪವೃಕ್ಷ ಎಂದೇ ಪ್ರಸಿದ್ಧರಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯು ನಗರದ ವಿವಿಧೆಡೆ ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು. ಬೆಳಗಿನಿಂದಲೇ ರಾಘವೇಂದ್ರ ಕ್ಷೇತ್ರಗಳಿಗೆ ಆಗಮಿಸಿದ ಭಕ್ತರು ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಮದ್ವ ಮತೋದ್ಧಾರಕ ಶ್ರೀರಾಘವೇಂದ್ರ ಯತಿಗಳು ಮಂತ್ರಾಲಯದಲ್ಲಿ ಜೀವಂತವಾಗಿ ಬೃಂದಾವನ ಪ್ರವೇಶಿಸಿದ ದಿನವನ್ನು ಆರಾಧನೆಯಾಗಿ ಆಚರಿಸಲಾಗುತ್ತದೆ. ರಾಯರು ಬೃಂದಾವನ ಪ್ರವೇಶಿಸಿ 354 ವರ್ಷಗಳು ಪೂರ್ಣಗೊಂಡಿದ್ದು ಎಲ್ಲೆಡೆ 354ನೇ ಆರಾಧನಾ ಮಹೋತ್ಸವ ನಡೆಯಿತು. ವಿಶೇಷವಾಗಿ ಸೋಮವಾರ ಮಧ್ಯಾರಾಧನೆಯ ಪ್ರಯುಕ್ತ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಗಳಲ್ಲಿ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ಮತ್ತಿತರ ವಿಶೇಷ ಪೂಜೆಗಳು ನಡೆಯಿತು.

ಜಯನಗರದ 5ನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಷ್ಟೋತ್ತರದೊಂದಿಗೆ ರಾಯರ ಬೃಂದಾವನಕ್ಕೆ ಮಹಾ ಅಭಿಷೇಕ ಮಾಡಿ ವಿಶೇಷ ರತ್ನ ಕವಚದಿಂದ ಅಲಂಕಾರ ಮಾಡಲಾಯಿತು. ಸ್ವರ್ಣ ಸಿಂಹಾಸನದಲ್ಲಿ ರಾಯರ ಮೂರ್ತಿಯನ್ನಿರಿಸಿ ಪಾದಪೂಜೆ, ಫಲ ಪುಷ್ಪ ಸಮರ್ಪಣೆ ಮಾಡಲಾಯಿತು. ಬಳಿಕ ಸುವರ್ಣ ಕನಕಾಭಿಷೇಕ, ಮಹಾಮಂಗಳಾರತಿ ನಡೆಸಿ ಭಕ್ತರಿಗೆ ತೀರ್ಥ, ಲ ಮಂತ್ರಾಕ್ಷತೆ ನೀಡಲಾಯಿತು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪತ್ನಿ ಸಮೇತ ಆಗಮಿಸಿ ರಾಯರ ದರ್ಶನ ಮಾಡಿದರು.

ಶೇಷಾದ್ರಿಪುರದಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನೆ ಪ್ರಯುಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜಾ-ವಿಧಿವಿಧಾನಗಳು ನಡೆದವರು. ಸಾವಿರಾರು ಭಕ್ತರ ದಿನಪೂರ್ತಿ ರಾಯರ ದರ್ಶನವನ್ನು ಮಾಡಿದರು.

ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟಿನ ಶ್ರೀ ಭುವನಗಿರಿ ಆಶ್ರಮದ ಶ್ರೀ ರಾಯರ ಮಠದಲ್ಲಿ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ರಾಯರ ದರ್ಶನ ಪಡೆದರು. ಮಲ್ಲೇಶ್ವರದ ಪಲಿಮಾರು ಮಠದಲ್ಲಿರುವ ರಾಯರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ನಗರದ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಗುರುರಾಯರ ದರ್ಶನ ಮಾಡಿದರು.

ವಿಜಯನಗರದ ಅಮರಜ್ಯೋತಿನಗರದ ಶ್ರೀಮನ್ ಮದ್ವಗುರು ರಾಘವೇಂದ್ರ ಟ್ರಸ್ಟ್ ಶ್ರೀರಾಘವೇಂದ್ರಸ್ವಾಮಿ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ರಾಯರ ಆರಾಧನೆ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಪ್ರಾತಃಕಾಲ ನಿರ್ಮಾಲ್ಯ ಸೇವೆ, ಅಷ್ಟೋತ್ತರ, ಲಪಂಚಾಮೃತ, ಪಾದಪೂಜೆ, ಕನಕಾಭಿಷೇಕ ಹಾಗೂ ಇತರೆ ಸೇವೆ ಮಾಡಲಾಯಿತು. ನಂತರ ದೇವರನಾಮ ಭಜನೆ, ಅಲಂಕಾರ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥಪ್ರಸಾದ, ರಜತ ರಥೋತ್ಸವ, ಸ್ವಸ್ತಿವಾಚನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net