ಶುದ್ಧ ಗಾಳಿ, ಪರಿಸರಕ್ಕೆ ತಪೋವನ ಅತ್ಯಗತ್ಯ : ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀವರ್ಚನ

New Project (20)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶುದ್ಧವಾದ ಗಾಳಿ, ಪರಿಸರಕ್ಕೆ ತಪೋವನ ಅತ್ಯಗತ್ಯ. ಪರಿಸರಕ್ಕೆ ಪೂಜೆ ಸಲ್ಲಿಸುವ ಸ್ಥಳದಲ್ಲಿ ದೇವರು ನೆಲೆಯಾಗುತ್ತಾನೆ. ಕಾಲಕಾಲಕ್ಕೆ ಆಗಬೇಕಾದ ಕೆಲಸಗಳ ಪುನರುಜ್ಜೀವನಕ್ಕೆ ಊರಿನ ಜನರು ಕೈಜೋಡಿಸಬೇಕು. ಇದು ಲೋಕಕ್ಕೆ ಅನುಕೂಲ ನೀಡುತ್ತದೆ ಎಂದು 1008 ಮಹಾಮಂಡಲೇಶ್ವರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಶ್ರೀ ಗುರುದೇವ ಟ್ರಸ್ಟ್‌ನ ಆದಿ ಪಜೀರಡ್ಕದ ಶ್ರೀ ದೇವಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ತಪೋವನ ನಿರ್ಮಾಣಕ್ಕೆ ಸಸ್ಯಗಳ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಹಸೀಲ್ದಾರ್ ಪೃಥ್ವಿ ಸಾನಿಕಂ, ಪ್ರಮುಖರಾದ ಪಿತಾಂಬರ ಹೇರಾಜೆ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್, ರಾಜ್ಯ ಕಾಂಗ್ರೆಸ್ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಮಿತಾ ಕೆ.ಪೂಜಾರಿ, ಲೋಕೇಶ್ವರಿ ವಿನಯಚಂದ್ರ, ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ವಿ.ಆರ್.ನಾಯಕ್, ಕೇಶವ ಬೆಳಾಲು, ಎಂ.ಕೆ. ಪ್ರಸಾದ್, ಪದ್ಮನಾಭ ಸಾಲ್ಯಾನ್, ಸಂತೋಷ್ ಕುಮಾರ್, ಗುರುರಾಜ್ ಗುರುಪಳ್ಳ, ಅನಂತೇಶ್ ಚಡಗ ಮತ್ತಿತರರಿದ್ದರು. ಟ್ರಸ್ಟಿ ತುಕಾರಾಂ ಸಾಲ್ಯಾನ್ ನಿರೂಪಿಸಿದರು.

ಬೆಳ್ತಂಗಡಿ ತಾಲೂಕಿಗೆ ಮಾದರಿ

ಆದಿ ಪಜರಡ್ಕದಲ್ಲಿರುವ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಅಗಸ್ತ್ಯ ಮುನಿಗಳ ತಪೋವನ ಇತ್ತು ಎಂಬ ಪ್ರತೀತಿ ಇದೆ. ಇಲ್ಲಿ ಇದೀಗ ಸುಮಾರು 74 ಜಾತಿಯ 200ಕ್ಕಿಂತ ಅಧಿಕ ಅಳಿವಿನಂಚಿನಲ್ಲಿರುವ ಹಾಗೂ ನಾನಾ ಭಾಗಗಳ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಈ ತಪೋವನವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಊರ ಜನರಿಗೆ ವಹಿಸಲಾಗಿದೆ. ಶಾಂತಿ, ನೆಮ್ಮದಿ, ಸ್ವಚ್ಛ ಪರಿಸರ, ಅರಣ್ಯದ ಮಹತ್ವ ಸಾರುವ ಈ ತಪೋವನ ಬೆಳ್ತಂಗಡಿ ತಾಲೂಕಿಗೆ ಮಾದರಿಯಾಗಿ ರೂಪುಗೊಳ್ಳಲಿದೆ.

ಜಿಲ್ಲೆಯಲ್ಲಿ ಸುಸಜ್ಜಿತ ತಪೋವನದ ಕೊರತೆ ಇದೆ. ಇಲ್ಲಿ ಋಷಿ, ಮುನಿಗಳಿಗೆ ಬೇಕಾದಂತಹ ಮಾದರಿಯ ತಪೋವನ ನಿರ್ಮಾಣವಾಗಲಿದೆ. ಸಾರ್ವಜನಿಕರ ನೆಮ್ಮದಿ ಶಾಂತಿಗೆ ತಪೋವನ ಪೂರಕ ವಾತಾವರಣ ನೀಡಲಿದೆ. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿ ಪೀಠಾಧೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net