

ತುಮಕೂರು: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಶಿವಸ್ಮರಣೆ ಮಾಡಲಾಯಿತು. ಶಿವನ ದೇವಾಲಯಗಳಲ್ಲಿ ಶುಕ್ರವಾರ ಎಲ್ಲೆಡೆ ಶಿವಸ್ತುತಿ ಕೇಳಿಬಂತು. ಶಿವನ ಆರಾಧಕರೇ ದೇವಾಲಯಗಳಲ್ಲಿ ತುಂಬಿಹೋಗಿದ್ದರು.
ಬೆಳಗ್ಗೆಯಿಂದಲೇ ಭಕ್ತರು ಸಾಲಿನಲ್ಲಿ ನಿಂತು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಶಿವನನ್ನು ಆರಾಧಿಸಿದರು. ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಉಪವಾಸ, ಪೂಜೆ ಹಾಗೂ ಜಾಗರಣೆ ಮೂಲಕ ಶ್ರದ್ಧಾ ಭಕ್ತಿಯಿಂದ ವಿಶೇಷವಾಗಿ ಶಿವರಾತ್ರಿ ಆಚರಿಸಲಾಯಿತು. ದೇಗುಲಗಳಲ್ಲಿ ಶಿವನ ದರ್ಶನ ಪಡೆದು ಭಕ್ತರು ಭಕ್ತಿಪರವಶರಾದರು.
ರಾತ್ರಿ ಇಡೀ ಜಾಗರಣೆ ವೇಳೆ ಶಿವಸ್ತ್ರೋತ್ರಗಳ, ಶಿವ ಭಜನೆಯಲ್ಲಿ, ಭಜನೆ, ಹರಿಕಥೆಗಳಲ್ಲಿ ತೊಡಗಿ ಭಕ್ತಿಭಾವ ಮೆರೆದರು. ನಗರದ ಭದ್ರಮ್ಮಚೌಲ್ಟ್ರಿ ವೃತ್ತದ ಬಳಿಯ ಸೋಮೇಶ್ವರ ದೇವಾಲಯದಲ್ಲಿ ಶಿವನಿಗೆ ಹಾಲಿನ ಅಭಿಷೇಕ, ಶಿವಲಿಂಗಕ್ಕೆ ಧೋತ್ರರಾ, ಬಿಲ್ವ ಪತ್ರೆ, ಎಳನೀರು ಅರ್ಪಿಸಿ ಭಕ್ತರು ಪೂಜೆ ಸಲ್ಲಿಸಿದರು. ಶಿವಲಿಂಗದ ಪಾದಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸುವ ದೃಶ್ಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಬೆಳಗಿನಿಂದಲೇ ಸಾವಿರಾರು ಭಕ್ತರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಸಾಲು ದೇವಾಲಯಗಳಲ್ಲಿ ಕಂಡುಬಂದಿತ್ತು.
ಬನಶಂಕರಿಯ ಶಿವನ ದೇವಾಲಯದಲ್ಲಿ ಶಿವನ ಬೃಹತ್ ಮೂರ್ತಿಗೆ ಹಾಗೂ ಬಸವಣ್ಣನಿಗೆ ವಿಶೇಷ ಅಲಂಕಾರ, ಪೂಜೆ ಮಾಡಲಾಗಿತ್ತು. ನಗರದ ಟಿಜಿಎಂಸಿ ಬ್ಯಾಂಕ್ ಬಳಿ ಶಿವರಾತ್ರಿ ಅಂಗವಾಗಿ ನಟರಾಜ ನೃತ್ಯ ಭಂಗಿಯ ಈಶ್ವರನ ಬೃಹತ್ ಮೂರ್ತಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವೀರಶೈವ ಬ್ಯಾಂಕ್ ಮುಂಭಾಗದ ನಂದಿ ವಿಗ್ರಹದ ಮುಂಭಾಗ ಶಿವಲಿಂಗು ದರ್ಶನವನ್ನು ಭಕ್ತರು ಮಾಡುವ ಮೂಲಕ ಶಿವರಾತ್ರಿ ಆಚರಣೆಯಲ್ಲಿ ಭಾಗಿಯಾದರು. ಕ್ಯಾತಸಂದ್ರದ ಚಂದ್ರಮೌಳೇಶ್ವರ ದೇವಸ್ಥಾನ, ಎಸ್‌ಎಸ್‌ಪುರಂ ಶ್ರೀಕನ್ಯಕಾ ಪರಮೇಶ್ವರಿ, ಶಾಂತಿನಗರದ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಬೆಳಗ್ಗಿನಿಂದಲೂ ಜನಜಂಗಳಿ ತುಂಬಿತ್ತು.
ಶ್ರೀಮಠದಲ್ಲಿ ಲಿಂಗದೀಕ್ಷೆ: ಶ್ರೀಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆ ನಡೆಯುತ್ತಿದ್ದು, ಶಿವರಾತ್ರಿ ದಿನದಂದು ವಿಶೇಷ ಪೂಜಾದಿಗಳಿಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ಶಿವಕುಮಾರ ಶ್ರೀಗಳ ಗದ್ದುಗೆಯಲ್ಲಿ ಜನಸಾಗರ ಸೇರಿತ್ತು. ಶಿವರಾತ್ರಿ ಅಂಗವಾಗಿ ಬೆಟ್ಟದ ಮೇಲೆ
ಲಿಂಗದೀಕ್ಷೆ ಸಹ ನೀಡಲಾಯಿತು. ನೂರಾರು ಭಕ್ತರು ಲಿಂಗದೀಕ್ಷೆ ಪಡೆದಿದ್ದು ವಿಶೇಷ.
ಜ್ಯೋತಿರ್ಲಿಂಗಗಳ ಉತ್ಸವ : ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ವಾಹನಗಳ ಮೇಲೆ ಜ್ಯೋತಿರ್ಲಿಂಗಗಳ ರಥಯಾತ್ರೆ , ಶಾಂತಿಯಾತ್ರೆ ಹಾಗೂ ಸದ್ಭಾವನಾ ಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ನಗರದ ರಿಂಗ್ ರಸ್ತೆ, ಕುಣಿಗಲ್ ರಸ್ತೆ, ಕಾಲ್ಟೆಕ್ಸ್ ಸರ್ಕಲ್, ಟೌನ್ ಹಾಲ್, ಭದ್ರಮ್ಮ ವೃತ್ತದ ಮೂಲಕ, ಎಸ್‌ಎಸ್ ಪುರಂ, ಎಸ್‌ಐಟಿ ಮುಖ್ಯರಸ್ತೆ ಹಾದು ಎಸ್‌ಎಸ್ ಸರ್ಕಲ್ ಬಳಿ ಸಂಪನ್ನಗೊಂಡಿತು.