

ಆನೇಕಲ್: ತಾಲೂಕಿನ ಗಡಿಭಾಗದ ಸಮಂದೂರು ತಿಮ್ಮಸಂದ್ರ ಗೇಟ್ ಬಳಿಯ ಕೈಲಾಸ ಯೋಗ ಕಲಾ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಶಿವರಾತ್ರಿ ಉತ್ಸವ ವೈಭವವಾಗಿತ್ತು, ವಿಶೇಷ ಪೂಜೆ, ಹೋಮ ಹವನ ಜರುಗಿದವು. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಎಸ್‌ಎಸ್‌ಏನ್ ಫೌಂಡೇಶನ್ ವತಿಯಿಂದ ಆಯೋಜನೆ ಮಾಡಿದ್ದ ವಿಶೇಷ ಪೂಜೆ ಹಾಗೂ ಹೋಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಹೊಸ ಬೆಳಕು ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಆರೋಗ್ಯತಪಾಸನಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಸಂಸ್ಥಾಪಕ ಕೆ.ಆರ್.ಸೋಮಶೇಖರ್ ಮಾತನಾಡಿ, ಮಹಾಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ ರಾತ್ರಿ ಹರಿಕಥೆ, ಭವ್ಯ ಶಿವನ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಶಿವನಿಗೆ ವಿಶೇಷ ಪೂಜೆ ಅಭಿಷೇಕ ಮತ್ತು ಪ್ರಸಾದ ವಿನಿಯೋಗ ನಡೆಯಿತು ಎಂದರು.ದೇವಾಲಯದ ಕಾರ್ಯದರ್ಶಿ ಆರ್.ರಾಜಶೇಖರ್ ಮಾತನಾಡಿ, ಶಿವ ವಿಷ ಕುಡಿದು ನೀಲಕಂಠನಾಗುತ್ತಾನೆ. ವಿಷ ಕುಡಿದವನಿಗೆ ಯಾರು ಊಟ ಮಾಡಲು ಹೇಳುವುದಿಲ್ಲ. ಜತೆಗೆ ವಿಷ ಕುಡಿದವರು ನಿದ್ರೆ ಮಾಡಬಾರದು ಎಂದು ಶಿವ ಜಾಗರಣೆ ಮಾಡುತ್ತಾನೆ, ಇದೇ ಕಾರಣಕ್ಕಾಗಿ ನಾವು ಶಿವರಾತ್ರಿ ದಿನದಂದು ಜಾಗರಣೆ ಹಾಗೂ ಉಪವಾಸ ಮಾಡಿ ಶಿವನನ್ನು ನೆನೆಯುತ್ತೇವೆ ಎಂದರು.
ಆನೇಕಲ್ ತಾಲೂಕು ತಿಮ್ಮಸಂದ್ರ ಗೇಟ್ ಬಳಿಯ ಕೈಲಾಸ ಯೋಗ ಕಲಾ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಶಿವನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಸ್ಥಾಪಕ ಕೆ.ಆರ್.ಸೋಮಶೇಖರ್, ಕಾರ್ಯದರ್ಶಿ ರಾಜಶೇಖರ್, ಹಿರಿಯ ಸಾಹಿತಿ ತಾ.ನಂ.ಕುಮಾರಸ್ವಾಮಿ, ನಂದಿನಿ,ಚಂದ್ರಶೇಖರ್, ಗಗನ್ ಶೇಖರ್, ಜಯಶ್ರೀ,ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಶಿವಣ್ಣ, ಹೊಸಬೆಳಕು ಟ್ರಸ್ಟ್ ಸಂಸ್ಥಾಪಕ ಜಿಗಣಿ ರಾಮಕೃಷ್ಣ ಇದ್ದರು.