ಶ್ರಾವಣ ಶನಿವಾರ ಶನೈಶ್ಚರಸ್ವಾಮಿ ಆರಾಧನೆ

23-AUG-GPT-1A-NAVAGRAHA
Published on

ಗುಂಡ್ಲುಪೇಟೆ: ತಾಲೂಕಿನಾದ್ಯಂತ ಕಡೇ ಶ್ರಾವಣ ಶನಿವಾರದ ಸಂಭ್ರಮ ಮನೆ ಮಾಡಿದ್ದು, ಭಕ್ತರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ವಿಷ್ಣುವಿನ ಆರಾಧಕರು ಕಳೆದ ಎರಡು ದಿನಗಳಿಂದ ತಮ್ಮ ಮನೆಗಳನ್ನು ಶುಚಿಗೊಳಿಸಿ ಶ್ರಾವಣ ಆರಾಧನೆಗೆ ಸಜ್ಜುಗೊಳಿಸಿದ್ದರು. ಶನಿವಾರ ಮುಂಜಾನೆ ಎದ್ದು ಮಡಿಯುಟ್ಟು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದರ್ಶನ ಪಡೆದರು. ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಹುಲಿಗಿನ ಮೊರಡಿ ವೆಂಕಟರಮಣಸ್ವಾಮಿ ಬೆಟ್ಟದ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.

ಪಟ್ಟಣ ಹೊರವಲಯದಲ್ಲಿರುವ ಕೆಬ್ಬೆಕಟ್ಟೆ ಶನೈಶ್ಚರ ಸ್ವಾಮಿ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಪಟ್ಟಣದ ರಾಮೇಶ್ವರ ದೇವಾಲಯದ ಆವರಣದ ಎದುರಿನಲ್ಲಿರುವ ನವಗ್ರಹ ದೇವಾಲಯದಲ್ಲಿ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ನವಗ್ರಹಗಳಿಗೆ ಮತ್ತು ಆಂಜನೇಯಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು.

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಯನಕ್ಷತ್ರಿಯ ಜನಾಂಗದ ವತಿಯಿಂದ ಶನೈಶ್ಚರಸ್ವಾಮಿ ಆರಾಧನೆ ಅಂಗವಾಗಿ ಅಲಂಕೃತ ಸಾರೋಟಿನಲ್ಲಿ ದೇವರ ಭಾವಚಿತ್ರ ಇರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net