ಅಕ್ಕಿಆಲೂರಲ್ಲಿ ಹಟ್ಟಿ ಲಕ್ಕವ್ವ ದೇವಿಯ ಆರಾಧನೆ

Hatti lakkavva Puje in akkialur
Published on

ಅಕ್ಕಿಆಲೂರ: ಪಟ್ಟಣದಲ್ಲಿ ಭಾನುವಾರ ಸಂಭ್ರಮ ಸಡಗರದಿಂದ ದೀಪಾವಳಿಯ ಹಟ್ಟಿ ಲಕ್ಕವ್ವ ದೇವಿಯ ಆರಾಧನೆ ಜರುಗಿತು. ಮಲೆನಾಡು ಸಿರಿಯಲ್ಲಿನ ಅಕ್ಕಿಆಲೂರ ಹಾಗೂ ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ದೀಪಾವಳಿ ಹಟ್ಟಿ ಲಕ್ಕವ್ವದೇವಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಮನೆಯಂಗಳದಿಂದ ದೇವರ ಕೋಣೆವರೆಗೂ ಪಾಂಡವರ ಪಾದಗಳನ್ನು ಚಿತ್ರಿಸಿ, ದೇವರ ಕೋಣೆಯಲ್ಲಿ ಗೋವಿನ ಸಗಣಿ, ಉತ್ರಾಣಿ, ಕಡ್ಡಿ, ಗೇರು, ಚೆಂಡು ಹೂವು, ಕಬ್ಬು, ಬಾಳೆಕಂಬಗಳಿಂದ ಹಟ್ಟಿಲಕ್ಕವ್ವ ದೇವಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಸಂಜೆ ಹಟ್ಟಿಲಕ್ಕವ್ವನಿಗೆ ಮಹಿಳೆಯರು ಅಡಕೆ ಸಿಪ್ಪೆಗಳಲ್ಲಿ ಆರತಿ ಬೆಳಗಿ, ಬಲ್ಲಾಳನ ಪ್ರಾರ್ಥನೆ ಮೂಲಕ ವಿಶೇಷವಾಗಿ ಪ್ರಾರ್ಥಿಸಿದರು. ನಂತರ ಹಟ್ಟಿ ಲಕ್ಕವ್ವದೇವಿ ಮೂರ್ತಿಗಳಿಗೆ ಆಕಳ ಕಾಲಿನಿಂದ ರ್ಸ³ಸಿ ಸಂಭ್ರಮಕ್ಕೆ ತೆರೆ ಎಳೆಯಲಾಯಿತು.

ಅಕ್ಕಿಆಲೂರಿನಲ್ಲಿ ಗೊಳ್ಳಕ್ಕವ್ವ ಎಂಬ ದೇವಿ ನೆಲೆಸಿರುವುದರಿಂದ ದೀಪಾವಳಿಯ ಬಲಿಪಾಡ್ಯಮಿಯನ್ನು ಗುರುವಾರ ಮತ್ತು ಭಾನುವಾರ ಮಾತ್ರ ಆಚರಿಸುವ ವಾಡಿಕೆ ಪಟ್ಟಣದಲ್ಲಿದೆ. ಹೀಗಾಗಿ, ಭಾನುವಾರ ಹಟ್ಟಿ ಲಕ್ಕವ್ವದೇವಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಹೋರಿ ಓಡಿಸುವ ಕಾರ್ಯಕ್ರಮ:

ದೀಪಾವಳಿಯಲ್ಲಿ ಹಟ್ಟಿ ಹಬ್ಬವೆಂದೇ ಪ್ರಸಿದ್ಧಿ ಪಡೆದಿರುವ ಹೋರಿ ಓಡಿಸುವ ಕಾರ್ಯಕ್ರಮ ಜನರ ಗಮನ ಸೆಳೆಯಿತು. ರೈತರು ತಮ್ಮ ಜೀವನಾಡಿ ಹೋರಿಗಳನ್ನು ಆಕರ್ಷಕವಾಗಿ ಅಲಂಕಾರಗೊಳಿಸಿದ್ದರು. ಪಟ್ಟಣದ ವಿರಕ್ತಮಠ ಓಣಿಯಲ್ಲಿ ಸಿದ್ಧವಾಗಿದ್ದ ಅಖಾಡದಲ್ಲಿ ಹೋರಿಗಳನ್ನು ಹುರುದುಂಬಿಸಿ ಓಡಲು ಬಿಟ್ಟರು. ‘ತಾಕ್ಕತ್ತಿದ್ರೆ ನಮ್ ಹೋರಿ ಮುಟ್ರಿ’ ಎಂದು ಸವಾಲು ಹಾಕಿದರು. ಇತ್ತ ಕೊಬ್ಬರಿ ಸರ ಕಟ್ಟಿಕೊಂಡು ಅಖಾಡದಲ್ಲಿ ಓಡುತ್ತಿದ್ದ ಹೋರಿಗಳನ್ನು ನಿಲ್ಲಿಸಲು ಪೈಲ್ವಾನರು ಮಾಡುತ್ತಿದ್ದ ಸಾಹಸ ಎಲ್ಲರನ್ನೂ ರೋಮಾಂಚನಗೊಳಿಸಿತು. ವೀರಕೇಸರಿ, ಬೆಳ್ಳಿ, ಸಿಜೆಬಿ ಸ್ವಾಕಾರ, ಬೆಳ್ಳಿ ಕುದುರೆ, ಹೀರಾ, ಹಿಂದು ದೊರೆ, ಕಲ್ಲಾಪುರ ಮಹಾರಾಜ ಸೇರಿ ನೂರಾರು ಹೋರಿಗಳು ಅಖಾಡದಲ್ಲಿ ಭಾರಿ ಓಟ ನಡೆಸಿದವು. ಸಾವಿರಾರು ಜನರ ಕೇಕೆ, ಚಪ್ಪಾಳೆ ಮುಗಿಲು ಮುಟ್ಟಿತ್ತು.

ಮಳೆ ಜಾಸ್ತಿ ಬಂದು ಬೆಳೆ ಹಾಳಾಗುತ್ತೆ, ಮಳೆ ಬರದೆ ಹೊಲ ಒಣಗುತ್ತೆ, ಏನೇ ಆದ್ರೂ ನಮ್ಮ ಸಂಪ್ರದಾಯಕ್ಕೆ ಯಾವುದೇ ಕೊರತೆ ಆಗದಂತೆ ಹಬ್ಬ ಮಾಡುತ್ತೇವೆ. ನಮ್ಮ ಪ್ರಾರ್ಥನೆ ಪ್ರಕೃತಿಗಾಗಿ, ಪಂಚಭೂತಗಳ ರಕ್ಷಣೆಗಾಗಿ ಇರುತ್ತದೆ. | ಬಸವರಾಜ ಅಯ್ಯಣ್ಣವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net