ಶ್ರೀಮಾರುತಿ ದೇವರ ಉಪಾಸನೆ ಅಗತ್ಯ

h5-Hanuman Chalisha 2
Published on

ಹುಬ್ಬಳ್ಳಿ: ಕಲಿಯುಗದಲ್ಲಿ ಶ್ರೀಮಾರುತಿ ದೇವರ ಉಪಾಸನೆ ಅತ್ಯಗತ್ಯ ಎಂದು ಹೆಬ್ಬಳ್ಳಿ ಶ್ರೀಕ್ಷೇತ್ರ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಗುರುಗಳು ಹೇಳಿದರು.

ನಗರದ ಗೋಕುಲ ರಸ್ತೆಯ ನಾನಕೀ ಕನ್‌ವೆನ್ಷನ್ ಹಾಲ್‌ನಲ್ಲಿ ಪೂರ್ವ ಸಂಕಲ್ಪಿತ 11 ಕೋಟಿ ಶ್ರೀ ಹನುಮಾನಚಾಲೀಸಾ ಪಾಠದ ಸಮಾರೋಪ ಸಮಾರಂಭ ನಿಮಿತ್ತ ಆಯೋಜಿಸಿರುವ 100 ಗಂಟೆಗಳ ಸಾಮೂಹಿಕ ಅಖಂಡ ಶ್ರೀ ಹನುಮಾನ್ ಚಾಲೀಸಾ ಪಠಣಕ್ಕೆ ಬುಧವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಹನುಮಾನ ಚಾಲೀಸ ಪಠಣದಿಂದ ಜೀವನಕ್ಕೆ ನೆಮ್ಮದಿ ತುಂಬಲಿದೆ. ಧೈರ್ಯ, ಶಾಂತಿ ಲಭಿಸಲಿದೆ. 2021ರಲ್ಲಿ 11 ಕೋಟಿ ಹನುಮಾನ ಚಾಲೀಸ ಪಠಣದ ಸಂಕಲ್ಪ ಮಾಡಲಾಗಿತ್ತು. ಅದೀಗ 20 ಕೋಟಿ ಆಗಿದೆ. ಇಂಥ ಸಂಕಲ್ಪ ನಿರಂತರವಾಗಿರಬೇಕು. ಸಮಾಧಾನ ಜೀವನಕ್ಕಾಗಿ ಮಾರುತಿ ದೇವರ ಅನುಗ್ರಹ ಅತ್ಯಗತ್ಯ ಎಂದರು.

ಇದಕ್ಕೂ ಮೊದಲು ಬೆಳಗ್ಗೆ 6ರಿಂದ 7ರವರೆಗೆ ಕಾಕಡಾರತಿ ಹಾಗೂ ಪ್ರಾತಃಕಾಲ ಪೂಜೆ ಸಲ್ಲಿಸಲಾಯಿತು. ನಂತರ 7.30ಕ್ಕೆ 100 ಗಂಟೆಗಳ ಶ್ರೀ ಹನುಮಾನ್ ಚಾಲೀಸಾ ಅಖಂಡ ಪಾಠದ ಸಂಕಲ್ಪ ಹಾಗೂ ಸಾಮೂಹಿಕ ಶ್ರೀ ಹನುಮಾನ ಚಾಲೀಸಾ ಪಾಠ ಆರಂಭಿಸಲಾಯಿತು. ಕರ್ನಾಟಕದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ರಾಜಸ್ತಾನದಿಂದ ಆಗಮಿಸಿದ್ದ ಭಕ್ತರು, ಪಠಣದಲ್ಲಿ ಭಾಗವಹಿಸಿದ್ದರು.

10.30ಕ್ಕೆ ಅಭಿಷೇಕ, ಮಧ್ಯಾಹ್ನ 1.30ಕ್ಕೆ ಮಹಾನೈವೇದ್ಯ, ಮಹಾಮಂಗಳಾರತಿ, ಮಹಾಪ್ರಸಾದ, 33 ಬ್ರಹ್ಮಚಾರಿಗಳ ಪೂಜೆ ಹಾಗೂ ಭೋಜನ ನೆರವೇರಿಸಲಾಯಿತುಲ. ಸಂಜೆ 7.30ಕ್ಕೆ ಆರತಿ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ, 9ಕ್ಕೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಶಶಿಧರ ಕುಲಕರ್ಣಿ, ಕೆ.ಜಿ. ಕುಲಕರ್ಣಿ, ಗಿರೀಶ ರಾಮದಾಸಿ, ರಾಮಚಂದ್ರ ಮುದ್ರೆಬೆಟ್ಟು, ಶ್ರೀಪಾದ ಪೂಜಾರ, ಡಾ.ವಿ.ಎಂ. ದೇಶಪಾಂಡೆ, ರಮೇಶ ಕುಲಕರ್ಣಿ, ವೆಂಕಟೇಶ ಸುಳ್ಳದ, ದಾಮೋದರ ಪಾಟೀಲ, ರಮೇಶ ಕುಲಕರ್ಣಿ, ಶಂಕರ ಪಾಟೀಲ ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net