ಬೆಳಗಾವಿಯಲ್ಲಿ ದುರ್ಗಾಮಾತಾ ದೌಡ್

IMG20241006195025.jpg
Published on

ಬೆಳಗಾವಿ: ನಗರದ ನಾಥ್‌ಪೈ ವೃತ್ತದಲ್ಲಿನ ಅಂಬಾಬಾಯಿ ದೇವಸ್ಥಾನದಲ್ಲಿ ದುರ್ಗಾವತಾರಿ ಶ್ರೀ ಕುಷ್ಮಾಂಡಾದೇವಿಯ ಆರಾಧನೆಯೊಂದಿಗೆ ದುರ್ಗಾಮಾತಾ ದೌಡ್ ನಾಲ್ಕನೇ ದಿನವಾದ ಭಾನುವಾರ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.

ಕುಷ್ಮಾಂಡಾದೇವಿಯ ಆರಾಧನೆಯೊಂದಿಗೆ ಪೂಜೆ ಸಲ್ಲಿಸಿ ಪ್ರೇರಣಾ ಮಂತ್ರದೊಂದಿಗೆ ಧರ್ಮ ಧ್ವಜಾರೋಹಣ ನೆರವೇರಿಸಲಾಯಿತು. ಪ್ರತಿ ಗಲ್ಲಿಗಳು ನವ ವಧುವಿನಂತೆ ಅಲಂಕಾರಗೊಂಡಿದ್ದವು. ವಿವಿಧ ಜಯಘೋಷಗಳನ್ನು ಮಾಡುತ್ತ ದೌಡ್ ಸಂಚರಿಸಿತು. ಸುಹಾಸಿನಿಯರು ಅರತಿ ಬೆಳಗಿ ದೌಡನ್ನು ಸ್ವಾಗತಿಸಿದರು. ಭಗವಾ ೇರಾ, ಶ್ವೇತ ವರ್ಣದ ವೇಷಭೂಷಣಗಳನ್ನು ತೊಟ್ಟ ಅಬಾಲವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಬಾಲ ಭವಾನಿ, ಛತ್ರಪತಿ ಶಿವಾಜಿ ಮಹಾರಾಜರ ಸಜೀವ ರೂಪಕಗಳು ಎಲ್ಲರ ಗಮನಸೆಳೆದವು. ಧಾರಕನಿಗಳ ಮೇಲೆ ಪುಷ್ಪ ವೃಷ್ಟಿಗೈದು ಸ್ವಾಗತಿಸುತ್ತಿದ್ದುದು ವಿಶೇಷವಾಗಿತ್ತು.

ನಾಫ್ ಪೈ ವೃತ್ತದಿಂದ ಆರಂಭಗೊಂಡ ದುರ್ಗಾಮಾತಾ ದೌಡ್, ಲಕ್ಷ್ಮೀ ಗಲ್ಲಿ, ಕಾರವಾರಿ ಗಲ್ಲಿ, ಮಾರುತಿ ಗಲ್ಲಿ, ಛತ್ರಪತಿ ಸಂಭಾಜಿ ರಸ್ತೆ, ಸರಾಫ್ ಗಲ್ಲಿ, ಗಾಢ ಮಾರ್ಗ, ಹೊಸೂರ ಬಸವನ ಗಲ್ಲಿ, ಆನಂದವಾಡಿ, ವಡಗಾವಿ ರಸ್ತೆ, ಆಳವಾನ ಗಲ್ಲಿ, ದಾನೇ ಗಲ್ಲಿ, ಖಡೇ ಬಝಾರ, ಕೋರೆ ಗಲ್ಲಿ ಮಾರ್ಗವಾಗಿ ಸಂಚರಿಸಿ, ಗೋವಾವೇಸ್ ಬಸವೇಶ್ವರ ವೃತ್ತಕ್ಕೆ ತಲುಪಿ ಕೊನೆಗೊಂಡಿತು. ದೌಡ್‌ನಲ್ಲಿ ಯುವಕ, ಯುವತಿಯರು ಪಾಲ್ಗೊಂಡು ಉತ್ಸಾಹ ತೋರಿದರು.

ದೇಶ ಮತ್ತು ಧರ್ಮ ಜಾಗೃತಿಯ ಸಂದೇಶ ನೀಡಲು ಪ್ರತಿವರ್ಷ ಬೆಳಗಾವಿಯಲ್ಲಿ ಶಿವಪ್ರತಿಷ್ಠಾನ ಹಿಂದೂಸ್ಥಾನ ವತಿಯಿಂದ 25 ವರ್ಷಗಳಿಂದ ಬೆಳಗಾವಿಯಲ್ಲಿ ದುರ್ಗಾಮಾತಾ ದೌಡ್ ಆಯೋಜಿಸಲಾಗುತ್ತಿದ್ದು, ನವರಾತ್ರಿಯಲ್ಲಿ ನಡೆಯುವ ಈ ದುರ್ಗಾಮಾತಾ ದೌಡ್ ನೋಡಲೂ ಬೇರೆಡೆಯಿಂದ ಜನರು ಬರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net