

ಶಿವಮೊಗ್ಗ: ಉಪ ಚುನಾವಣೆ ಮೂಲಕ ಚನ್ನಪಟ್ಟಣದಲ್ಲಿ ಪ್ರಜಾಪ್ರಭುತ್ವದ ಒಂದುಗೂಡಿಸುವ ಕೆಲಸ ಮಾಡಲಾಗಿದೆ. ಚನ್ನಪಟ್ಟಣದ ಪ್ರತಿ ಮನೆಯಲ್ಲೂ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಫೋಟೋ ಇದ್ದು ಪ್ರತಿನಿತ್ಯ ಪೂಜೆ ಮಾಡುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರಪ್ಪ ಕೊಟ್ಟ ಆಶ್ರಯ, ಆರಾಧನಾ ಯೋಜನೆಗಳನ್ನು ಅಲ್ಲಿನ ಜನರು ಇನ್ನೂ ಮರೆತಿಲ್ಲ ಎಂದರು.
ಚುನಾವಣೆ ಎಂದ ಮೇಲೆ ಫಲಿತಾಂಶ ಕೆಲವೊಮ್ಮೆ ಹೆಚ್ಚು ಕಡಿಮೆ ಆಗುತ್ತವೆ. ಆದರೆ ಮತದಾನೋತ್ತರ ಸಮೀಕ್ಷೆಗಳು ಏನೇ ಹೇಳಿದರೂ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿತ್ತು. ಅದರಂತೆ ಪ್ರಚಾರದ ವೇಳೆ ನಮ್ಮ ಕೆಲಸದ ಆಧಾರದ ಮೇಲೆ ಜನರ ಬಳಿ ಹೋಗಿ ಮತ ಕೇಳಿದ್ದೇವು. ಹಾಗಾಗಿ ನಮ್ಮ ಪರ ಫಲಿತಾಂಶ ಬಂದಿದೆ ಎಂದರು.
ಚುನಾವಣಾ ಅಸ್ತ್ರವಾಗಿ ಬಿಜೆಪಿ ಖಜಾನೆ ಖಾಲಿ, ವಕ್ಫ್, ಮೂಡಾ ವಿಚಾರವನ್ನು ಪ್ರಸ್ತಾಪಿಸಿತು. ನಮ್ಮ ದೇಶದಲ್ಲಿರುವ ಕಾನೂನು ಗೆದ್ದಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಪವಿತ್ರ ಮೈತ್ರಿ ಎಂಬುದು ಉಪ ಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ ಎಂದರು.