ದೇಗುಲ ನಿರ್ಮಾಣದಷ್ಟೇ ಪೂಜಾ ಕಾರ್ಯಗಳು ಅವಶ್ಯ, ವಿಧಾನ ಪರಿಷತ್ ಸದಸ್ಯ ಎಂಟಿಬಿ ಅಭಿಮತ, ಸಮೇತನಹಳ್ಳಿಯಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ

must 2
Published on

ಬೆಂಗಳೂರು ಗ್ರಾಮಾಂತರ: ಶ್ರದ್ಧಾಭಕ್ತಿ ಕೇಂದ್ರಗಳ ನಿರ್ಮಾಣದಷ್ಟೇ ಪ್ರಾಮುಖ್ಯತೆಯನ್ನು ಪೂಜಾ ಪುನಸ್ಕಾರಗಳಿಗೂ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.

ಹೊಸಕೋಟೆ ತಾಲೂಕಿನ ಸಮೇತನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಶ್ರೀ ಮಹಾಗಣಪತಿ, ಶ್ರೀ ಕೃಷ್ಣ, ಕನಕದಾಸರ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ನಾಡಿಗೆ ತನ್ನದೇ ಇತಿಹಾಸ ವಿಶೇಷ ಪರಂಪರೆಯಿದೆ. ವಿಶ್ವದಲ್ಲೇ ವಿಭಿನ್ನ ವಿಶೇಷ ಎನಿಸುವಂಥ ಧಾರ್ಮಿಕ ಪರಂಪರೆ ಇದೆ. ಇದಕ್ಕೆ ನಮ್ಮ ದೇಗುಲಗಳೇ ಸಾಕ್ಷಿ. ಮನಸ್ಸಿಗೆ ನೆಮ್ಮದಿ ದೊರಕಿಸಿಕೊಡುವ ದೇಗುಲಗಳ ರಕ್ಷಣೆ ಹಾಗೂ ಜವಾಬ್ದಾರಿ ಪ್ರಮುಖವಾಗಿದೆ ಎಂದರು.

ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಹೆಚ್ಚು ಆಯೋಜಿಸುವುದರಿಂದ ಶಾಂತಿ ನೆಮ್ಮದಿ ಲಭಿಸಲಿದೆ ಎಂದರು.

ಕಾಲ ಕೂಡಿ ಬಂದಿದೆ: ಗ್ರಾಮದಲ್ಲಿ ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕನಕ ದೇವಾಲಯ ನಿರ್ಮಾಣದ ಪ್ರತಿಷ್ಠಾಪನೆಗೆ ಕಾಲ ಕೂಡಿ ಬಂದಿದೆ. ದಾನಿಗಳ ನೆರವಿನಿಂದ, ಸಮುದಾಯದ ಮುಖಂಡರಿಂದ ಜೀರ್ಣೋದ್ಧಾರ ಸಾಧ್ಯವಾಗಿದೆ ಎಂದರು.

ಕಳಸಗಳ ಮೆರವಣಿಗೆ ಮೂಲಕ ದೇವಾಲಯದ ಕುಂಭಾಭಿಷೇಕ ನೆರವೇರಿಸಲಾಯಿತು. ವೀರಗಾಸೆ, ಮಂಗಳವಾದ್ಯ, ಡೊಳ್ಳುಕುಣಿತದೊಂದಿಗೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಕನಕಗುರುಪೀಠ ನಂದಗುಡಿ ಶಾಖಾ ಮಠದ ಸಿದ್ದರಾಮಾನಂದ ಸ್ವಾಮೀಜಿ, ಮೈಸೂರು ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಸಿ.ನಾಗರಾಜ್, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ರಾಮು, ಮುಖಂಡರಾದ ಚಿಕ್ಕಣ್ಣ, ಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net